ಈಗಂತೂ ಮಳೆ ಎಡಬಿಡದೆ ಸುರಿಯುತ್ತಿದೆ. ಇದರಿಂದಾಗಿ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಸಂಜೆಯಾಗುತ್ತಿದ್ದಂತೆ ಗುಂಯ್ ಎಂದು ಸದ್ದು ಮಾಡುತ್ತಾ ಕಿಟಕಿಯ ಒಳಗೆ ನುಗ್ಗುತ್ತವೆ. ನಮಗೇ ಗೊತ್ತಿಲ್ಲದೆ ನಮ್ಮ ಚರ್ಮದ ಮೇಲೆ ಕುಳಿತು ರಕ್ತ ಹೀರಿ ಹಾರಿಹೋಗುತ್ತವೆ. ಇದರಿಂದಾಗಿ ಆ ಜಾಗದಲ್ಲಿ ಕೆಂಪು ಗುಳ್ಳೆ,
ತುರಿಕೆ ಕಾಡುತ್ತದೆ. ಸೊಳ್ಳೆಕಚ್ಚಿದ ಜಾಗದಲ್ಲಿ ಇನ್ಫೆಕ್ಷನ್ ರೀತಿಯಲ್ಲಿ ಆಗಿ ಅಲ್ಲೇ ಗಾಯವೂ ಆಗಬಹುದು. ಅಲ್ಲದೆ ಸೊಳ್ಳೆ ಕಡಿತದಿಂದ ಮಲೇರಿಯಾದಂತಹ ರೋಗಗಳೂ ಬರಬಹುದು. ಹೀಗಾಗಿ ಸೊಳ್ಳೆ ಕಡಿತದ ಅಪಾಯವನ್ನು ಹೇಗೆ ತಪ್ಪಿಸಿಕೊಳ್ಳಬಹುದು ಎನ್ನುವುದಕ್ಕೆ ಇಲ್ಲಿದೆ ನೋಡಿ ಟಿಪ್ಸ್
ಪುದೀನಾ ಎಣ್ಣೆ
ಪುದೀನಾ ಎಣ್ಣೆಯು ನೈಸರ್ಗಿಕ ಕೀಟನಾಶಕ ಮತ್ತು ಸೊಳ್ಳೆ ನಿವಾರಕವಾಗಿದೆ. ಒಂದು ಚಮಚ ಪುದೀನಾ ಎಣ್ಣೆಗೆ ಅರ್ಧ ಚಮಚ ಲಿಂಬು ರಸವನ್ನು ಸೇರಿಸಿ ಕೈ ಕಾಲುಗಳಿಗೆ ಹಚ್ಚಿಕೊಳ್ಳಿ. ಇದರಿಂದ ಸೊಳ್ಳೆಗಳು ಕಚ್ಚುವುದನ್ನು ತಡೆಯಬಹುದು.
ಪುದೀನಾ ಎಣ್ಣೆಯು ಆಂಟಿಮೈಕ್ರೊಬಿಯಲ್ ಆಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಆಕಸ್ಮಾತ್ ಸೊಳ್ಳೆ ಕಡಿದಿದ್ದರೂ ಅದು ಸೋಂಕು ಉಂಟಾಗದಂತೆ ತಡೆಯುತ್ತದೆ.
ದಾಲ್ಚಿನಿ ಎಣ್ಣೆ
ದಾಲ್ಚಿನಿ ಎಣ್ಣೆಯನ್ನು ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಬಳಸಬಹುದಾಗಿದೆ. ಈ ಎಣ್ಣೆಯನ್ನು ಸ್ಪ್ರೇ ರೀತಿಯಲ್ಲಿ ಬಳಸಬಹುದಾಗಿದೆ. ಅಥವಾ ಚರ್ಮಕ್ಕೆ ಸ್ವಲ್ಪ ಸ್ವಲ್ಪ ಹಚ್ಚಿ ಮಸಾಜ್ ಮಾಡಿಕೊಳ್ಳಬಹುದಾಗಿದೆ.
ನೀವೇನಾದರೂ ಎಲ್ಲಾದರೂ ಮನೆಯಿಂದ ಹೊರಗೆ ಹೋಗುವುದಾದರೆ ಅಥವಾ ರಾತ್ರಿ ಮಲಗುವಾಗ ಈ ಎಣ್ಣೆಯನ್ನು ಹಚ್ಚಿಕೊಂಡು ಮಲಗಬಹುದು. ಇದರಿಂದ ಸೊಳ್ಳೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.
ಈರುಳ್ಳಿ
ಸೊಳ್ಳೆ ಕಡಿತದ ಕಿರಿಕಿರಿಯಿಂದ ಪಾರಾಗಲು ಈರುಳ್ಳಿ ಉತ್ತಮ ಮನೆಮದ್ದಾಗಿದೆ. ಅವು ಆಂಟಿಫಂಗಲ್ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಒಂದು ಈರುಳ್ಳಿಯಿಂದ ಒಂದು ಸ್ಲೈಸ್ ಅನ್ನು ಕತ್ತರಿಸಿ ಸೊಳ್ಳೆ ಕಡಿದ ಜಾಗದಲ್ಲಿ ಇರಿಸಿಕೊಳ್ಳಿ 5 ನಿಮಿಷಗಳ ಬಳಿಕ ತೆಗೆದು ತೊಳೆಯಿರಿ. ಇದರಿಂದ ಇನ್ಫೆಕ್ಷನ್ ಉಂಟಾಗುವುದು ತಪ್ಪುತ್ತದೆ.
ಅಲೋವೆರಾ
ಆಕಸ್ಮಾತ್ ಸೊಳ್ಳೆ ಕಚ್ಚಿದರೆ ಆ ಜಾಗದಲ್ಲಿ ಅಲೋವಾರ ಜೆಲ್ನ್ನು ಹಚ್ಚಿಕೊಳ್ಳಿ. ಅಲೋವೆರಾ, ತುರಿಕೆ ಮತ್ತು ಕಿರಿಕಿರಿಯನ್ನು ನಿವಾರಿಸುತ್ತದೆ. ಅಲ್ಲದೆ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ತಾಜಾ ಅಲೋವೆರಾ ಇದ್ದರೆ ಸಣ್ಣ ಭಾಗವನ್ನು ಕತ್ತರಿಸಿ ಮತ್ತು ತಕ್ಷಣದ ಪರಿಹಾರಕ್ಕಾಗಿ ಕಡಿತಕ್ಕೆ ಅನ್ವಯಿಸಿ. ಸ್ವಲ್ಪ ಸಮಯದ ನಂತರ ತೊಳೆಯಿರಿ.
ಜೇನುತುಪ್ಪ
ಜೇನುತುಪ್ಪವು ಗಾಯ ಅಥವಾ ಗುಳ್ಳೆಯನ್ನು ಗುಣಪಡಿಸುವ ಗುಣವನ್ನು ಹೊಂದಿದೆ. ಸೊಳ್ಳೆ ಕಚ್ಚಿದ್ದಲ್ಲಿ ಜೇನುತುಪ್ಪವನ್ನು ಅನ್ವಯಿಸುವುದರಿಂದ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಸೊಳ್ಳೆ ಕಚ್ಚಿ ಕೆಂಪು ಗುಳ್ಳೆ ಕಾಣಿಸಿಕೊಂಡಾಗ ಇದನ್ನು ಹಚ್ಚಿಕೊಳ್ಳಿ. ಇದರಿಂದ ಕಲೆ ಕೂಡ ಉಳಿಯುವುದಿಲ್ಲ.