ವಾಷಿಂಗ್ಟನ್: ತೃತೀಯ ಲಿಂಗಿ ಕ್ರೀಡಾಪಟುಗಳು ಮಹಿಳಾ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂಕಿತ ಹಾಕಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ್ದ ಟ್ರಂಪ್, ‘ಇನ್ನು ಮುಂದೆ ಅಮೆರಿಕದಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರ ಗುರುತಿಸಲಾಗುತ್ತದೆ. ಇದೇ ನಮ್ಮ ಸರಕಾರದ ಅಧಿಕೃತ ನೀತಿಯಾಗಲಿದೆ’ ಎಂದು ಹೇಳಿದ್ದರು. ಇದೀಗ ಶ್ವೇತಭವನದಲ್ಲಿ ತೃತೀಯ ಲಿಂಗಿ ಕ್ರೀಡಾಪಟುಗಳು ಮಹಿಳಾ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಅಂಕಿತ ಹಾಕಿದ್ದಾರೆ. ಈ ನಿಯಮ ತಕ್ಷಣದಿಂದಲೇ ಜಾರಿಗೆ ಬರಲಿದೆ.
ನಾವು ಮಹಿಳಾ ಕ್ರೀಡಾಪಟುಗಳ ಹೆಮ್ಮೆಯ ಸಂಪ್ರದಾಯವನ್ನು ರಕ್ಷಿಸುತ್ತೇವೆ. ಪುರುಷರು ನಮ್ಮ ಮಹಿಳೆಯರನ್ನು, ಬಾಲಕಿಯರನ್ನು ಸೋಲಿಸಲು, ವಂಚಿಸಲು ಅವಕಾಶ ನೀಡುವುದಿಲ್ಲ, ಇಂದಿನಿಂದ ಮಹಿಳಾ ಕ್ರೀಡೆಗಳು ಮಹಿಳೆಯರಿಗೆ ಮಾತ್ರʼ ಎಂದು ಆದೇಶಕ್ಕೆ ಸಹಿ ಹಾಕುವ ಮೊದಲು ಟ್ರಂಪ್ ಹೇಳಿದ್ದಾರೆ. ಸಹಿ ಹಾಕುವ ವೇಳೆ ಮಕ್ಕಳು ಮತ್ತು ಮಹಿಳಾ ಕ್ರೀಡಾಪಟುಗಳು ಅವರನ್ನು ಸುತ್ತುವರಿದಿದ್ದರು. ಟ್ರಂಪ್ ಆದೇಶವನ್ನು ಅವರು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದ್ದಾರೆ.