ವಾಶಿಂಗ್ಟನ್: ವಿಶ್ವದ ಅಂತ್ಯತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ನಾಲ್ಕು ವರ್ಷದ ಮಗ ಸಿಂಬಳವನ್ನು ಡೆಸ್ಕ್ ಗೆ ಒರೆಸಿದ ಎಂಬ ಕಾರಣಕ್ಕೆ ಡಾನಾಲ್ಡ್ ಟ್ರಂಪ್ 145 ವರ್ಷಗಳಷ್ಟು ಪುರಾತನವಾದ ಐತಿಹಾಸಿಕ ರೆಸಲ್ಯೂಟ್ ಡೆಸ್ಕ್ ಅನ್ನು ತಾತ್ಕಾಲಿಕವಾಗಿ ಬದಲಿಸಲು ಆದೇಶಿಸಿದ್ದಾರೆ. ರೆಸಲ್ಯೂಟ್ ಡೆಸ್ಕ್ ಬದಲಾಗಿ ತಮ್ಮ ಕಚೇರಿಯಲ್ಲಿ ಸಿ ಆ್ಯಂಡ್ ಒ ಡೆಸ್ಕ್ ಅಳವಡಿಸಲು ಸೂಚಿಸಿದ್ದು ಟ್ರಂಪ್ ರ ಈ ದಿಢೀರ್ ನಿರ್ಧಾರ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಕಳೆದ ವಾರ ಸರಕಾರಿ ವೆಚ್ಚವನ್ನು ತಗ್ಗಿಸುವ ಕಾರ್ಯಾದೇಶಗಳಿಗೆ ಸಹಿ ಮಾಡಲು ಸರಕಾರಿ ವೆಚ್ಚ ಇಲಾಖೆ ಮುಖ್ಯಸ್ಥ ಎಲಾನ್ ಮಸ್ಕ್ ತಮ್ಮ ನಾಲ್ಕು ವರ್ಷದ ಪುತ್ರ ಲಿಟಲ್ ಎಕ್ಸ್ ನೊಂದಿಗೆ ಓವಲ್ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಟಿವಿ ನೇರ ಪ್ರಸಾರವಾಗುತ್ತಿರುವಾಗಲೇ ಮಸ್ಕ್ ಅವರ ನಾಲ್ಕು ವರ್ಷದ ಮಗ ತನ್ನ ಮೂಗಿನ ಹೊಳ್ಳೆಗಳಿಗೆ ಕೈ ಹಾಕಿದ್ದ ಸಿಂಬಳವನ್ನು ಡೊನಾಲ್ಡ್ ಟ್ರಂಪ್ ಆಸೀನರಾಗಿದ್ದ ರೆಸಲ್ಯೂಟ್ ಡೆಸ್ಕ್ ಗೆ ಒರೆಸಿದ್ದನು. ಇದು ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಇದರ ಬೆನ್ನಿಗೇ ರೆಸಲ್ಯೂಟ್ ಡೆಸ್ಕ್ ಅನ್ನು ತಾತ್ಕಾಲಿಕವಾಗಿ ಬದಲಿಸುವಂತೆ ಆದೇಶಿಸಿರುವ ಡೊನಾಲ್ಡ್ ಟ್ರಂಪ್, ಅದರ ಬದಲು ಸಿ ಆ್ಯಂಡ್ ಒ ಡೆಸ್ಕ್ ಅನ್ನು ತಮ್ಮ ಕಚೇರಿಯಲ್ಲಿ ಅಳವಡಿಸುವಂತೆ ಸೂಚಿಸಿದ್ದಾರೆ.
145 ವರ್ಷಗಳಷ್ಟು ಪುರಾತನವಾದ ಕಲಾತ್ಮಕ ರೆಸಲ್ಯೂಟ್ ಡೆಸ್ಕ್ ಐತಿಹಾಸಿಕ ಮಹತ್ವ ಹೊಂದಿದೆ. ಈ ಡೆಸ್ಕ್ ಅನ್ನು ಒಂದು ಕಾಲದಲ್ಲಿ ಆರ್ಕ್ಟಿಕ್ ಶೋಧನೆಗಾಗಿ ಬಳಸಿ, ನಂತರ ಕೈಬಿಡಲಾಗಿದ್ದ ಬ್ರಿಟನ್ ನ ಎಚ್ಎಂಎಸ್ ರೆಸಲ್ಯೂಟ್ ಹಡಗಿನಿಂದ ಕೆತ್ತನೆ ಮಾಡಲಾಗಿದೆ. ಈ ಹಡಗನ್ನು 1880ರಲ್ಲಿ ಅಮೆರಿಕ ಅಧ್ಯಕ್ಷ ರುದರ್ ಫೋರ್ಡ್ ಹೇಯ್ ಗೆ ರಾಣಿ ವಿಕ್ಟೋರಿಯಾ ಉಡುಗೊರೆ ನೀಡಿದ್ದರು. ಈ ಐತಿಹಾಸಿಕ ಡೆಸ್ಕ್ ಅನ್ನು ಪಶ್ಚಿಮ ಪಾರ್ಶ್ವದಲ್ಲಿರುವ ಬಹುತೇಕ ಎಲ್ಲ ಅಮೆರಿಕ ನಾಯಕರು ಬಳಸಿದ್ದಾರೆ.
ಈ ಐತಿಹಾಸಿಕ ರೆಸಲ್ಯೂಟ್ ಡೆಸ್ಕ್ ಅನ್ನು ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಜೋ ಬೈಡನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಬಳಸಿದ್ದರು. ಜೋ ಬೈಡನ್ ಗೂ ಮುನ್ನ ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಕೂಡಾ ಈ ಡೆಸ್ಕ್ ಅನ್ನು ತಮ್ಮ ಅಧಿಕಾರಾವಧಿಯುದ್ದಕ್ಕೂ ಬಳಸಿದ್ದರು. ಆದರೀಗ, ದಿಢೀರನೆ ಈ ರೆಸಲ್ಯೂಟ್ ಡೆಸ್ಕ್ ಬದಲಿಸಲು ಆದೇಶಿಸಿರುವ ಡೊನಾಲ್ಡ್ ಟ್ರಂಪ್, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಶ್ ಮತ್ತಿತರರು ಬಳಸಿದ್ದ ಸಿ ಆ್ಯಂಡ್ ಒ ಡೆಸ್ಕ್ ಅನ್ನು ಓವಲ್ ಕಚೇರಿಯಲ್ಲಿ ಅಳವಡಿಸುವಂತೆ ಆದೇಶಿಸಿದ್ದಾರೆ.
ರೆಸಲ್ಯೂಟ್ ಡೆಸ್ಕ್ ಅನ್ನು ಬದಲಿಸುತ್ತಿರುವ ಕುರಿತು ಟ್ರುತ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, “ಸುಂದರವಾದ ರೆಸಲ್ಯೂಟ್ ಡೆಸ್ಕ್ ಮರುನವೀಕರಣಗೊಳ್ಳಬೇಕಿರುವುದರಿಂದ, ಅದನ್ನು ತಾತ್ಕಾಲಿಕವಾಗಿ ಬದಲಿಸಲಾಗುತ್ತಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಎಲಾನ್ ಮಸ್ಕ್ ರ ಪುತ್ರ ತನ್ನ ಸಿಂಬಳವನ್ನು ರೆಸಲ್ಯೂಟ್ ಡೆಸ್ಕ್ ಗೆ ಒರೆಸಿದ್ದರಿಂದಲೇ ಅದನ್ನು ಬದಲಿಸಲಾಗುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.