ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಮೆರಿಕಾದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಆಯ್ಕೆಯಾಗಿದ್ದು, ವಿಶ್ವದ ಗಣ್ಯಾತಿಗಣ್ಯರು ಶುಭಾಶಯ ಕೋರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯದ ಜೊತೆಗೆ ಅಮೆರಿಕಾ-ಭಾರತದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸದ್ಯ ಯುಎಸ್ ಚುನಾವಣೆಯ ಫಲಿತಾಂಶಗಳಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಚುನಾವಣಾ ಮತಗಳ ಎಣಿಕೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗಿಂತ ಭರ್ಜರಿ ಅಂತರವನ್ನು ಕಾಯ್ದುಕೊಂಡಿದ್ದು, ಕಮಲಾ ಹ್ಯಾರಿಸ್ 195 ಎಲೆಕ್ಟೋರಲ್ ಮತಗಳನ್ನು ಪಡೆದಿದ್ದರೆ, ಡೊನಾಲ್ಡ್ ಟ್ರಂಪ್ 266 ಎಲೆಕ್ಟೋರಲ್ ಮತಗಳನ್ನು ಪಡೆದಿದ್ದಾರೆ.
ಇದೀಗ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ‘ನಿಮ್ಮ ಹಿಂದಿನ ಅಧಿಕಾರಾವಧಿಯ ಯಶಸ್ಸಿನ ಮೇಲೆ ನೀವು ಮತ್ತೊಂದು ಐತಿಹಾಸಿಕ ಚುನಾವಣಾ ವಿಜಯ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ-ಯುಎಸ್ ಸಮಗ್ರ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಮ್ಮ ಸಹಕಾರವನ್ನು ನವೀಕರಿಸಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಜನರ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಮತ್ತು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸೋಣ’ ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ನಡುವೆ ಉತ್ತಮವಾದ ರಾಜತಾಂತ್ರಿಕ ಸಂಬಂಧಗಳು, ಕಾರ್ಯತಂತ್ರದ ಸಹಕಾರ ಮತ್ತು ವೈಯಕ್ತಿಕವಾಗಿಯೂ ಉತ್ತಮ ಸೌಹಾರ್ದ ಸಂಬಂಧವಿದೆ. 2019 ರಲ್ಲಿ, ಹೂಸ್ಟನ್ನಲ್ಲಿ ನಡೆದ ‘ಹೌಡಿ ಮೋದಿ’ ಮತ್ತು 2020 ರಲ್ಲಿ ಅಹಮದಾಬಾದ್ನಲ್ಲಿ ‘ನಮಸ್ತೆ ಟ್ರಂಪ್’ ನಂತಹ ದೊಡ್ಡ ಕಾರ್ಯಕ್ರಮಗಳ ಮೂಲಕ ಮೋದಿ-ಟ್ರಂಪ್ ಸ್ನೇಹ ಹೆಸರು ಮಾಡಿತ್ತು. ಈ ಎರಡೂ ಸಮಾವೇಶಗಳಲ್ಲಿ ಇಬ್ಬರು ದಿಗ್ಗಜ ನಾಯಕರು ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿ ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಅವರು ರಕ್ಷಣಾ ಮತ್ತು ಭದ್ರತೆಯ ವಿಷಯಗಳಲ್ಲಿ ಪರಸ್ಪರ ನಿಕಟವಾಗಿ ಕೆಲಸ ಮಾಡಿದ ಕಾರಣ ಟ್ರಂಪ್ ಅಧಿಕಾರಾವಧಿಯಲ್ಲಿ ಭಾರತದೊಂದಿಗೆ ಸಂಬಂಧ ಬಲಗೊಂಡಿತ್ತು. ಉಭಯ ನಾಯಕರು ಭಯೋತ್ಪಾದನೆಯ ವಿಷಯದಲ್ಲಿ ಕಠಿಣ ನಿಲುವು ತಳೆದಿರುವುದು ಕೂಡ ಇದಕ್ಕೆ ಕಾರಣವಾಗಿತ್ತು.