ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಆಕ್ರಮಣಶೀಲ ಆಡಳಿತವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಈ ಹಿಂದೆ ಹಲವು ದೇಶಗಳಿಗೆ ನೆರವು ನೀಡುವುದಾಗಿ ಘೋಷಿಸಿದ್ದ ಟ್ರಂಪ್ ಆ ಬಳಿಕ ಹಿಂಪಡೆದಿದ್ದರು. ಇದೀಗ ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (ಯುಎಸ್ಏಡ್)ಯ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಯುಎಸ್ಏಡ್ ವೆಬ್ಸೈಟ್ನಲ್ಲಿ 2 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ.
ಪ್ರಪಂಚದಾದ್ಯಂತ ಇರುವ ಸಂಸ್ಥೆಯ ಕೆಲ ಉದ್ಯೋಗಿಗಳನ್ನು ಹೊರತುಪಡಿಸಿ, ಸಾವಿರಾರು ಸಿಬ್ಬಂದಿಗೆ ಬಲವಂತದ ರಜೆ ನೀಡಲಾಗಿದೆ. ಉದ್ಯೋಗಿಗಳ ವಜಾಕ್ಕೆ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ, ಟ್ರಂಪ್ ಸರ್ಕಾರ ಈ ಕ್ರಮ ಕೈಗೊಂಡಿದೆ.
ಯುಎಸ್ ಏಡ್ ಸಿಬ್ಬಂದಿಯನ್ನು ಸರ್ಕಾರ ವಜಾ ಮಾಡುತ್ತಿರುವುದರ ವಿರುದ್ಧ ತಡೆಯಾಜ್ಞೆ ನೀಡಬೇಕು ಎಂದು ಕೋರಿ ನೌಕರರ ಒಕ್ಕೂಟ ಫೆಡರಲ್ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಆದರೆ, ಇದನ್ನು ನ್ಯಾಯಾಧೀಶೆ ಕಾರ್ಲಾ ನಿಕೋಲ್ಸ್ ನಿರಾಕರಿಸಿದ್ದಾರೆ. ಹೀಗಾಗಿ ಟ್ರಂಪ್ ಏಕಕಾಲಕ್ಕೆ ಸಾವಿರಾರು ಉದ್ಯೋಗಿಗಳ ಕೆಲಸಕ್ಕೆ ಕತ್ತರಿ ಹಾಕುತ್ತಿದ್ದಾರೆ.
ಅನಗತ್ಯ ಸರ್ಕಾರಿ ವೆಚ್ಚ ಕಡಿಮೆ ಮಾಡಲು ಟ್ರಂಪ್ ಸಲಹೆಗಾರ ಮಸ್ಕ್ ನೇತೃತ್ವದ ಸಮಿತಿಯು ಈಗಾಗಲೇ ಹಲವಾರು USAID ಉದ್ಯೋಗಿಗಳನ್ನು ವಜಾಗೊಳಿಸಿದೆ. ಮಸ್ಕ್ ಹಾಗೂ ಟ್ರಂಪ್ ಅವರ ಈ ನಿರ್ಧಾರವು ಉಳಿದ ಉದ್ಯೋಗಿಗಳಿಗೆ ಭಯ ಉಂಟು ಮಾಡಿದೆ.