ಬೆಂಗಳೂರು:- ಬಸ್ ಟಿಕೆಟ್ ದರ ಹೆಚ್ಚಳ ಬೆನ್ನಲ್ಲೇ ಜನರಿಗೆ ಮತ್ತೆ ನಾಲ್ಕು ಬೆಲೆ ಏರಿಕೆ ಬಿಸಿ ತಟ್ಟಲಿದೆ. ಈ ಮೂಲಕ ಹೊಸವರ್ಷಕ್ಕೆ ದರ ಏರಿಕೆ ಆಗುತ್ತಲೇ ಇದೆ. ಜನರಿಗೆ ಸಂಕಷ್ಟ ಒಡ್ಡುತ್ತಿದೆ.
KSRTC, BMTC ಟಿಕೆಟ್ ದರ: ನಿಮ್ಮ ಊರಿಗೆ ಎಷ್ಟು!? ಇಲ್ಲಿ ತಿಳಿಯಿರಿ ಜನರೇ!
2014 ರ ಬಳಿಕ ನೀರಿನ ದರ ಪರಿಷ್ಕರಿಣೆಯಾಗಿಲ್ಲ ಎಂದು ಕಾರಣ ಹೇಳುತ್ತಿರುವ ಜಲಮಂಡಳಿ, ಇದೀಗ ಸರ್ಕಾರದ ಮಧ್ಯಸ್ಥಿಕೆಯಲ್ಲೇ ನೀರಿನ ದರ ಪರಿಷ್ಕರಣೆ ಮಾಡೋ ಮೂಲಕ ಸಿಟಿಮಂದಿಗೆ ದರಯೇರಿಕೆಯ ಬರೆ ಎಳೆಯೋಕೆ ತಯಾರಿ ನಡೆಸಿದೆ. ಸದ್ಯ ಜನವರಿ 2ನೇ ವಾರದಲ್ಲಿ ಶಾಸಕರ ಜೊತೆ ಸಭೆ ನಡೆಸಲಿರೋ ಡಿಸಿಎಂ ಡಿ.ಕೆ.ಶಿವಕುಮಾರ್, ನೀರಿನ ದರ ಏರಿಕೆಯ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆ ದಟ್ಟವಾಗಿದ್ದು, ಇತ್ತ ಜಲಮಂಡಳಿ ಕೂಡ ದರಯೇರಿಕೆ ಸುಳಿವು ಕೊಟ್ಟಿದೆ
ಸದ್ಯ ನೀರಿನ ದರ ಏರಿಕೆಯ ಬಗ್ಗೆ ಇತ್ತೀಚೆಗಷ್ಟೇ ಬೆಂಗಳೂರಿನ 27 ಶಾಸಕರಿಗೆ ಪತ್ರ ಬರೆದಿದ್ದ ಜಲಮಂಡಳಿ, ಡಿಸಿಎಂ ಸಭೆಯಲ್ಲಿ ದರಯೇರಿಕೆಗೆ ಬೆಂಬಲ ಕೊಡಿ ಎಂದು ಮನವಿ ಮಾಡಿತ್ತು, ಇತ್ತ ಜಲಮಂಡಳಿಯ ಮನವಿಗೆ ಶಾಸಕರು ಕೂಡ ಎಸ್ ಅಂದಿದ್ರು, ಇದರಿಂದ ಈ ತಿಂಗಳಲ್ಲೇ ನಡೆಯೋ ಸಭೆಯಲ್ಲಿ ನೀರಿನ ದರ ಪರಿಷ್ಕರಣೆಯಾಗೋದು ಪಕ್ಕ ಎನ್ನಲಾಗುತ್ತಿದೆ. ಸದ್ಯ ಸಾಲು ಸಾಲು ಬೆಲೆಯೇರಿಕೆಯ ಬಿಸಿಯಿಂದ ತತ್ತರಿಸಿರೋ ಸಿಟಿಮಂದಿಗೆ, ಇದೀಗ ನೀರಿನ ದರ ಏರಿಕೆಯ ಹೊರೆ ಹೊರುವ ಸ್ಥಿತಿ ಕೂಡ ಎದುರಾಗೋಕೆ ಕೌಂಟ್ ಡೌನ್ ಶುರುವಾಗಿದೆ.
ಇನ್ನು ನೀರಿನ ಪೂರೈಕೆಗೆ ಬಳಸ್ತಿರೋ ವಿದ್ಯುತ್ ಶಕ್ತಿಯ ದರವನ್ನ ಭರಿಸೋಕೆ ಆಗುತ್ತಿಲ್ಲ. ನೀರಿನ ಪೂರೈಕೆಯಲ್ಲಿ ವಿದ್ಯುತ್ ದರ ಹೊರೆಯಾಗ್ತಿರೋದರಿಂದ ನೀರಿನ ದರ ಏರಿಕೆ ಅನಿವಾರ್ಯ ಎಂದು ಜಲಮಂಡಳಿ ಹೇಳುತ್ತಿದ್ದರೆ, ಇತ್ತ ಈಗಾಗಲೇ ದುಬಾರಿ ದುನಿಯಾದಿಂದ ಕಂಗೆಟ್ಟಿದ್ದ ಸಿಟಿಮಂದಿ, ಇದೀಗ ನೀರಿನ ದರ ಏರಿಕೆಯ ಬರೆ ಕೂಡ ಬೀಳುತ್ತೆ ಅನ್ನೋ ವಿಚಾರ ಕೇಳಿ ಕಂಗಾಲಾಗಿಬಿಟ್ಟಿದ್ದಾರೆ. ಬರುವ ಸಂಬಳದಲ್ಲಿ ಎಲ್ಲವನ್ನ ನಿರ್ವಹಣೆ ಮಾಡಿಕೊಂಡು ಹೋಗ್ತಿರೋ ಜನರಿಗೆ ನೀರಿನ ದರ ಹೆಚ್ಚಾದ್ರೆ ಸಮಸ್ಯೆ ತಟ್ಟುತ್ತೆ ಎಂದು ಕಿಡಿಕಾರುತ್ತಿದ್ದಾರೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಮೆಟ್ರೋ ಜಾಲ ವಿಸ್ತರಣೆ ಆಗುತ್ತಲೇ ಇದೆ. ಪ್ರತಿದಿನ ಮೆಟ್ರೋದಲ್ಲಿ ಸಂಚಾರ ಮಾಡುವ ಪ್ರಯಾಣಿಕರ ಸಂಖ್ಯೆ ಒಂಭತ್ತು ಲಕ್ಷ ದಾಟಿದೆ. ಆದರೆ ನಿರ್ವಹಣಾ ವೆಚ್ಚ ಹೆಚ್ಚಾಗಿದ್ಯಂತೆ, ಹಾಗಾಗಿ ಟಿಕೆಟ್ ದರ ಹೆಚ್ಚಳ ಮಾಡಲು ಬಿಎಂಆರ್ಸಿಎಲ್ ಮುಂದಾಗಿದ್ದು, ಜನವರಿ ಎರಡನೇ ವಾರದಲ್ಲಿ ನಡೆಯುವ ಬೋರ್ಡ್ ಮೀಟಿಂಗ್ ನಲ್ಲಿ ಹೊಸ ದರ ಜಾರಿಯಾಗುವ ಎಲ್ಲಾ ಸಾಧ್ಯತೆಗಳಿದ್ಯಂತೆ.
ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್) ಮತ್ತೆ ನಂದಿನಿ ಹಾಲಿನ ದರ ಪರಿಷ್ಕರಣೆಗೆ ಮುಂದಾಗಿದೆ. ಪ್ರತಿ ಲೀಟರ್ ಹಾಲಿನ ದರದಲ್ಲಿ5 ರೂ. ಏರಿಕೆ ಮಾಡುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಕೆಎಂಎಫ್, ಆರು ತಿಂಗಳ ಹಿಂದೆಯಷ್ಟೇ ರಾಜ್ಯದಲ್ಲಿನಂದಿನಿ ಹಾಲಿನ ದರ ಪರಿಷ್ಕರಣೆಯೊಂದಿಗೆ ಗ್ರಾಹಕರಿಗೆ ಹೆಚ್ಚುವರಿ ಹಾಲು ವಿತರಿಸಲು ಆರಂಭಿಸಿತ್ತು. ಈಗ ರೈತರ ಹಿತದೃಷ್ಟಿಯಿಂದ ಹಾಲಿನ ದರ ಪರಿಷ್ಕರಿಸಲು ಮುಂದಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ(ಬೆಸ್ಕಾಂ) ಸೇರಿ ಕರ್ನಾಟಕದ ಎಲ್ಲ ಎಸ್ಕಾಂಗಳು ವಿದ್ಯುತ್ ದರ ಏರಿಕೆಗೆ ಪ್ಲ್ಯಾನ್ ಮಾಡಿವೆ. ಮುಂದಿನ ಮೂರು ವರ್ಷಗಳಿಗೆ ಅನುಗುಣವಾಗುವಂತೆ ಪ್ರತಿ ಯುನಿಟ್ ದರ ಏರಿಕೆಗೆ ಮುಂದಾಗಿವೆ. 2025-26 ರಲ್ಲಿ ಪ್ರತಿ ಯೂನಿಟ್ ಗೆ 67 ಪೈಸೆ, 2026-27 ರಲ್ಲಿ ಪ್ರತಿ ಯೂನಿಟ್ಗೆ 75 ಪೈಸೆ ಹಾಗೂ 2027-28 ರಲ್ಲಿ 91 ಪೈಸೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿವೆ. ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ನ.30 ಕೊನೆಯ ದಿನವಾಗಿತ್ತು. ಆ ಗಡುವಿನೊಳಗೆ ಎಲ್ಲಾ ಎಸ್ಕಾಂಗಳು ಕೂಡ ದರ ಏರಿಕೆಗೆ ಪ್ರಸ್ತಾವನೆ ಕೊಟ್ಟಿವೆ. ದರ ಏರಿಕೆ ಒಟ್ಟೊಟ್ಟಿಗೆ ಬಹುತೇಕ ಏಕ ಮಾದರಿಯಲ್ಲಿಯೇ ಆಗಲಿದೆ ಎಂದು ಕೆಇಆರ್ಸಿ ಮೂಲಗಳು ತಿಳಿಸಿವೆ.