ಬೆಂಗಳೂರು:- ಪೊಲೀಸರ ವರ್ಗಾವಣೆ ಪದೇ ಪದೇ ಅಸಾಧ್ಯ ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಪೊಲೀಸ್ ಇಲಾಖೆಯಲ್ಲಿ ಕೆಳಹಂತದ ಸಿಬ್ಬಂದಿಯನ್ನು ಪದೇಪದೆ ವರ್ಗಾವಣೆ ಮಾಡಲು ಅಸಾಧ್ಯ. ಅಪರಾಧ ಪ್ರಕರಣಗಳ ತನಿಖೆಗೆ ಅಡ್ಡಿಯಾಗಲಿದೆ ಎಂದರು.
ಮೈಸೂರು ರಸ್ತೆ ಕುಂಬಳಗೂಡು ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಗೃಹ ಸಚಿವರು ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಕ್ರಿಮಿನಲ್ಗಳ ಮೇಲೆ ನಿಗಾ ವಹಿಸುವುದು ಮತ್ತು ಅಪರಾಧ ಕೃತ್ಯಗಳ ತನಿಖೆಯಲ್ಲಿ ಕೆಳಹಂತದ ಪೊಲೀಸ್ ಸಿಬ್ಬಂದಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ. ಪದೇ ಪದೆ ವರ್ಗಾವಣೆ ಮಾಡಿದರೇ ತನಿಖೆಗೆ ಮತ್ತು ಅಪರಾಧ ಕೃತ್ಯಗಳ ಮೇಲೆ ನಿಗಾವಹಿಸಲು ಕಷ್ಟವಾಗಲಿದೆ. ಜತೆಗೆ ಜಿಲ್ಲಾವಾರು ವರ್ಗಾವಣೆಗೆ ನಿರ್ಬಂಧ ಇರುವುದು ಸಹ ಕಾರಣವಾಗಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.
ಪೊಲೀಸ್ ಠಾಣೆಗಳಿಗೆ ಬರುವ ನೊಂದ ಜನರಿಗೆ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡುವ ಮೂಲಕ ಇಲಾಖೆಗೆ ಒಳ್ಳೆಯ ಹೆಸರು ತರಬೇಕು. ಶಾಸಕ ಎಸ್.ಟಿ. ಸೋಮಶೇಖರ್ ಸಚಿವರಾಗಿದ್ದಾಗ ನೂತನ ಕಟ್ಟಡ ನಿರ್ಮಾಣಕ್ಕೆ 3.56 ಕೋಟಿ ರೂ. ಅನುದಾನ ತಂದಿದ್ದರು. ಇದರಿಂದ ಸುಸಜ್ಜಿತ ಠಾಣೆಗಳನ್ನು ನಿರ್ಮಿಸಲಾಗಿದೆ.
ಮಹಿಳಾ ಪೊಲೀಸರಿಗೆ ಪ್ರತ್ಯೇಕ ಶೌಚಗೃಹ, ವಿಶ್ರಾಂತಿ ಗೃಹ, ರಾತ್ರಿ ಉಳಿಯಲು ಕೊಠಡಿ ಇರುವುದು ವಿಶೇಷವಾಗಿದೆ. ದೂರುದಾರರು ಮತ್ತು ಸಾರ್ವಜನಿಕರು ಠಾಣೆಗೆ ಬಂದಾಗ ಅವರಿಗೆ ಕೂರಲು ಸ್ಥಳ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಒದಗಿಸಲಾಗಿದೆ. ಹಳೆಯ ಕೇಸ್ಗಳಿಗೆ ಸಂಬಂಧಿಸಿದ ರೆಕಾರ್ಡ್, ಜಪ್ತಿ ಮಾಡಿದ ವಸ್ತುಗಳ, ಸಶಸಗಳ ಸಂಗ್ರಹ ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಕೊಠಡಿ ನಿರ್ಮಾಣ ಮಾಡಲಾಗಿದೆ.
ಹಂಪಾಪುರ ಗ್ರಾಮದ ಜನರು, 35 ಕಿ.ಮೀ. ದೂರದ ಕಗ್ಗಲಿಪುರ ಠಾಣೆಗೆ ಹೋಗಬೇಕು. ಹತ್ತಿರದ ಕುಂಬಳಗೂಡು ಠಾಣೆಗೆ ಸೇರಿಸಬೇಕೆಂಬ ಮನವಿ ಸಲ್ಲಿಸಿದ್ದಾರೆ. ಈಬಗ್ಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ ನೀಡಿರುವುದಾಗಿ ಗೃಹ ಸಚಿವರು ಮಾಹಿತಿ ನೀಡಿದರು.