ಕೋಲ್ಕತಾ:- ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಕೇಸ್ ಗೆ ಸಂಬಂಧಪಟ್ಟಂತೆ ತಪ್ಪಿದ್ದರೆ ಮಗನನ್ನು ಗಲ್ಲಿಗೇರಿಸಿ ಎಂದು ಆರೋಪಿ ತಾಯಿ ಹೇಳಿದ್ದಾರೆ.
ಆರ್ಜಿ ಕರ್ ಆಸ್ಪತ್ರೆಯ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಸಂಜಯ್ ರಾಯ್ನ ತಾಯಿ ಮಾಲತಿ ರಾಯ್ ಭಾನುವಾರ ತಮ್ಮ ಮಗ ತಪ್ಪಿತಸ್ಥನಾಗಿದ್ದರೆ ಗಲ್ಲಿಗೆ ಏರಿಸಿದರೂ ಬೇಸರ ಇಲ್ಲ ಎಂದು ಹೇಳಿದ್ದಾರೆ.
ನಾನು ಒಂಟಿಯಾಗಿದ್ದಾಗ ಅಳುತ್ತೇನೆ, ಆದರೆ ಅವನ ಶಿಕ್ಷೆಯನ್ನು ವಿಧಿ ಎಂದು ಸ್ವೀಕರಿಸುತ್ತೇನೆ. ಮಹಿಳೆಯಾಗಿ ಮತ್ತು ಮೂರು ಹೆಣ್ಣು ಮಕ್ಕಳ ತಾಯಿಯಾಗಿ, ನನ್ನ ಮಗಳಂತಿರುವ ಮಹಿಳಾ ವೈದ್ಯೆಯ ತಾಯಿಯ ಯಾತನೆ ಮತ್ತು ನೋವನ್ನು ನಾನು ಅನುಭವಿಸಬಲ್ಲೆ. ಅವನ ಅಪರಾಧವು ಕಾನೂನಿನ ದೃಷ್ಟಿಯಲ್ಲಿ ಸಾಬೀತಾಗಿರುವುದರಿಂದ ನನಗೆ ಯಾವುದೇ ಆಕ್ಷೇಪವಿಲ್ಲ ಎಂದಿದ್ದಾರೆ.
ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ, ಜೈಲಿನಲ್ಲಿ ಮಗನನ್ನು ಭೇಟಿಯಾಗಿದ್ದೀರಾ ಎಂಬ ಪ್ರಶ್ನೆಗೆ, ಇಲ್ಲ, ನಾನು ಏಕೆ ಭೇಟಿ ಮಾಡಬೇಕು? ಆರೋಪಗಳು ಸುಳ್ಳು ಎಂದು ಕಂಡುಬಂದಿದ್ದರೆ ನಾನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದೆ ಎಂದಿದ್ದಾರೆ.