ಬೆಂಗಳೂರು:- ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನ ವಿಶ್ವಮಟ್ಟದಲ್ಲಿ ಅನಾವರಣ ಮಾಡಲಾಗಿದೆ. ನೆದರ್ ಲ್ಯಾಂಡ್ ನ ಲೋಕೆಷನ್ ಟೆಕ್ನಾಲಜಿ ಸಂಸ್ಥೆ ಟಾಮ್ ಟಾಮ್ ಬಿಡುಗಡೆ ಮಾಡಿರೋ ವಿಶ್ವದ ಅತಿಹೆಚ್ಚು ಸ್ಲೋ ಮೂವಿಂಗ್ ಟ್ರಾಫಿಕ್ ಹೊಂದಿರುವ ನಗರಗಳ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಮೂರನೇ ಸ್ಥಾನ ಸಿಕ್ಕಿದೆ.
ರಾಜಧಾನಿಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರೀ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗಿರುವ ವರದಿ ಬಹಿರಂಗವಾಗಿದ್ದು, ಬೆಂಗಳೂರಿನಲ್ಲಿ 10 ಕಿಲೋಮೀಟರ್ ದೂರ ತಲುಪೋಕೆ 34 ನಿಮಿಷ 10 ಸೆಕೆಂಡ್ ಸಮಯ ಬೇಕಿದೆ ಎಂದು ವರದಿ ತಿಳಿಸಿದೆ. ಅಲ್ಲದೇ ರಾಜಧಾನಿಯ ಜನರು ವರ್ಷದಲ್ಲಿ ಐದು ದಿನಗಳಷ್ಟು ಸಮಯವನ್ನ ಟ್ರಾಫಿಕ್ ನಲ್ಲೇ ಕಳೆಯುತ್ತಿರುವುದು ವರದಿ ಹೇಳಿದೆ.
ಇನ್ನು ಟಾಮ್ ಟಾಮ್ ಸಂಸ್ಥೆಯ ವರದಿ ಹೊರಬೀಳುತ್ತಿದ್ದಂತೆಯೇ ಬಿಜೆಪಿ ನಾಯಕರು ರಾಜ್ಯ ರಾಜಧಾನಿಯ ಟ್ರಾಫಿಕ್ ಕಂಟ್ರೋಲ್ ಮಾಡುವುದಕ್ಕೆ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಚಾಟಿ ಬೀಸಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯತೆ ಬಗ್ಗೆ ಟೀಕಿಸಿರೋ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಬೆಂಗಳೂರು ಅಂದ್ರೆ ಉದ್ಯಾನ ನಗರಿ ಅನ್ನೋ ಘನತೆ ಇತ್ತು, ಆದ್ರೆ, ಈಗ ವಾಹನ ದಟ್ಟಣೆಗೆ ಸಿಲುಕಿ ನರಳೋ ನಗರವಾಗಿದೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ
ಇತ್ತ ಬಿಜೆಪಿಯ ಅಧಿಕೃತ ಎಕ್ಸ್ ಖಾತೆಯಲ್ಲೂ ಟ್ರಾಫಿಕ್ ಕಿರಿಕಿರಿ ನಿರ್ವಹಣೆಯಲ್ಲಿ ಎಡವಿದ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.