ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪತ್ನಿ ಬುಶ್ರಾ ಬೀಬಿ ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯವು ವಜಾಗೊಳಿಸಿದೆ.
ಅರ್ಜಿಯನ್ನು ತಿರಸ್ಕರಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಾರುಖ್ ಅರ್ಜುಮಂದ್ ಅವರು, ಇಮ್ರಾನ್ ಖಾನ್ ಹಾಗೂ ಬುಶ್ರಾ ವಿರುದ್ಧ ಸೋಮವಾರ ದೋಷಾರೋಪ ನಿಗದಿ ಮಾಡುವುದಾಗಿ ತಿಳಿಸಿದರು.
ಇಸರ್ಕಾರದ ಮುಖ್ಯಸ್ಥರು, ಪ್ರಮುಖರಿಗೆ ಬರುವ ಉಡುಗೊರೆಗಳು ತೋಷಖಾನಾ ಇಲಾಖೆ ಸುಪರ್ದಿಗೆ ಹೋಗಲಿವೆ. ಇಂತಹ ಉಡುಗೊರೆಗಳ ಪೈಕಿ ದುಬಾರಿ ಮೌಲ್ಯದ ಗಡಿಯಾರವೊಂದನ್ನು ಇಮ್ರಾನ್ ಹೆಚ್ಚಿನ ಬೆಲೆಗೆ ಮಾರಿಕೊಂಡು, ಲಾಭ ಗಳಿಸಿದ್ದರು ಎಂಬ ಆರೋಪ ಇದೆ. ಇದನ್ನು ತೋಷಖಾನಾ ಪ್ರಕರಣ ಎನ್ನಲಾಗುತ್ತದೆ.