ನಾಳೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕಾಮನ್ ಡಿಪಿ ಬಿಡುಗಡೆ ಮಾಡಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಈ ಬಾರಿಯ ಹುಟ್ಟುಹಬ್ಬವನ್ನು ಸಾಕಷ್ಟು ಸರಳವಾಗಿ ಆಚರಿಸಿಕೊಳ್ಳಲು ದರ್ಶನ್ ಮುಂದಾಗಿದ್ದಾರೆ. ಈ ವರ್ಷದ ಹುಟ್ಟುಹಬ್ಬ ದರ್ಶನ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
ಕಳೆದ ಏಳೆಂಟು ತಿಂಗಳಲ್ಲಿ ದರ್ಶನ್ ಜೀವನ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಾಗಿದೆ. ಜೈಲಿನಿಂದ ಹೊರಬಂದ ಬಳಿಕ ಎದುರು ಬಂದಿರುವ ಮೊದಲ ಹುಟ್ಟುಹಬ್ಬ ಇದಾಗಿದೆ. ಹಾಗಾಗಿ ಈ ಹುಟ್ಟುಹಬ್ಬ ದರ್ಶನ್ ಪಾಲಿಗೆ ಅವರ ಕುಟುಂಬದವರ ಪಾಲಿಗೆ ಅತ್ಯಂತ ಪ್ರಮುಖವಾದುದ್ದಾಗಿದೆ.
ದರ್ಶನ್ ಅವರ ಹುಟ್ಟುಹಬ್ಬದ ಕಾಮನ್ ಡಿಪಿಯನ್ನು ಅವರ ಪತ್ನಿ ವಿಜಯಲಕ್ಷ್ಮಿ ಬಿಡುಗಡೆ ಮಾಡಿದ್ದಾರೆ. ಇದು ಮೊದಲನೇ ಬಾರಿಗೆ ವಿಜಯಲಕ್ಷ್ಮಿ ಅವರು ದರ್ಶನ್ ಹುಟ್ಟುಹಬ್ಬದ ಕಾಮನ್ ಡಿಪಿ ಬಿಡುಗಡೆ ಮಾಡುತ್ತಿದ್ದಾರೆ. ಸದ್ಯ ಬಿಡುಗಡೆ ಮಾಡಲಾಗಿರುವ ಡಿಪಿಯಲ್ಲಿ, ದರ್ಶನ್ರ ದೊಡ್ಡ ಕಟೌಟ್ನ ಚಿತ್ರವಿದ್ದು, ಚಿತ್ರದಲ್ಲಿ ಅಭಿಮಾನಿಗಳೆಡೆಗೆ ದರ್ಶನ್ ಕೈಬೀಸುತ್ತಿದ್ದಾರೆ. ಹಿನ್ನೆಲೆಯಲ್ಲಿ ಹಲವು ಅಂಗಡಿಗಳಿವೆ. ಎಲ್ಲ ಅಂಗಡಿಗಳಿಗೂ ದರ್ಶನ್ ಅವರ ಹೆಸರು ಇಡಲಾಗಿದೆ. ಅಭಿಮಾನಿಗಳು ದರ್ಶನ್ ಕಟೌಟ್ ಕಡೆಗೆ ಕೈ ಬೀಸುತ್ತಿರುವ ಚಿತ್ರಣವೂ ಡಿಪಿಯಲ್ಲಿದೆ.
ವಿಜಯಲಕ್ಷ್ಮಿ ಬಿಡುಗಡೆ ಮಾಡಿರುವ ಕಾಮನ್ ಡಿಪಿಗೆ ಕಟ್ಟು ಹಾಕಿಸಿ ಅದರೊಟ್ಟಿಗೆ ಧನ್ವೀರ್ ಗೌಡ ಚಿತ್ರ ತೆಗೆಸಿಕೊಂಡಿದ್ದಾರೆ. ವಿಜಯಲಕ್ಷ್ಮಿ ಹಂಚಿಕೊಂಡಿರುವ ಡಿಪಿಯನ್ನು ದರ್ಶನ್ರ ಅಭಿಮಾನಿಗಳು ತಮ್ಮ ಪ್ರೊಫೈಲ್ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.