ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ನಾಲ್ವರನ್ನು ಮತ್ತೆ ಕೋರ್ಟ್ಗೆ ಹಾಜರುಪಡಿಸಲಿದ್ದು ಮುಂದೆ ಏನಾಗಲಿದೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಶುರುವಾಗಿದೆ.
ಪ್ರಕರಣದ ಆರೋಪಿಗಳಾದ ದರ್ಶನ್, ವಿನಯ್, ಧನರಾಜ್, ಪ್ರದೋಶ್ ಕಸ್ಟಡಿ ಅವಧಿ ಅಂತ್ಯವಾಗಲಿದ್ದು, ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ. ಇವರು ನಾಲ್ವರಿಗೂ ಜೈಲಾಗಲಿದೆ ಎಂಬ ಮಾತು ಕೇಳಿ ಬರ್ತಿದೆ.
ಆರೋಪಿಗಳನ್ನು ಮೂರು ಬಾರಿ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಧ್ಯಾಹ್ನ 3 ಗಂಟೆಯ ನಂತರ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಿಂದ ಕೋರ್ಟ್ಗೆ ಆರೋಪಿಗಳನ್ನು ಕರೆದೊಯ್ಯಲಾಗುವುದು.
ನಟ ದರ್ಶನ್ ಮನೆಯಲ್ಲಿ ಸಿಕ್ಕಂತಹ ಹಣದ ಬಗ್ಗೆ ವಿಚಾರಿಸಲು ಎರಡು ದಿನದ ಹಿಂದೆ ಪೊಲೀಸರು, ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಮತ್ತೆ ಕಸ್ಟಡಿಗೆ ತೆಗೆದುಕೊಂಡಿದ್ದರು. ಅಷ್ಟೊಂದು ಹಣ ಎಲ್ಲಿಂದ ಬಂತು? ಯಾವ ಅಕೌಂಟ್ನಿಂದ ಹಣ ಡ್ರಾ ಮಾಡಿದ್ರಿ? ಬೇರೆ ಯಾರಾದ್ರೂ ಹಣ ನೀಡಿದ್ರಾ? ಈ ಹಣಕ್ಕೆ ದಾಖಲೆಗಳು ಇದೆಯಾ? ಅಷ್ಟೊಂದು ಹಣ ಮನೆಯಲ್ಲಿ ಇಡಲು ಕಾರಣ ಏನು? ಹೀಗೆ ಅನೇಕ ಪ್ರಶ್ನೆಗಳನ್ನು ಕೇಳಿ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.
ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಪೊಲೀಸರ ತನಿಖೆ ಪೂರ್ಣಗೊಂಡಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮುಕ್ಕಾಲುಭಾಗ ಆರೋಪಿಗಳು ಈಗಾಗಲೇ ಜೈಲುಪಾಲಾಗಿದ್ದಾರೆ. ದರ್ಶನ್ ಸೇರಿ ಉಳಿದ ನಾಲ್ವರು ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದ ಅನ್ನಪೂಣೇಶ್ವರಿ ನಗರ ಠಾಣೆ ಪೊಲೀಸರು ವಿಚಾರಣೆ ಮುಗಿಸಿದ್ದಾರೆ. ಮಹತ್ವದ ಸಾಕ್ಷ್ಯಾಧಾರಗಳನ್ನೂ ಕಲೆ ಹಾಕಿದ್ದಾರೆ. ಎ2 ದರ್ಶನ್, ಎ9 ಧನರಾಜ, ಎ10 ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕ ಶೆಡ್ ವಿನಯ್ ಹಾಗೂ ಎ14 ಗಿರಿನಗರದ ಪ್ರದೂಶ್ ಕೇಸ್ನಲ್ಲಿ ತನಿಖೆಗೆ ಸರಿಯಾಗಿ ಸ್ಪಂದಿಸದೇ ಸಾಕ್ಷ್ಯನಾಶಕ್ಕೆ ಯತ್ನಿಸಿರೋದು ಬಯಲಾಗಿದೆ. ಹೀಗಾಗಿ ಮತ್ತೆರಡು ದಿನ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ಮುಗಿಸಿದ್ದಾರೆ. ಈಗಾಗಲೇ ನಟ ದರ್ಶನ್ಗೆ 13 ದಿನಗಳ ಕಸ್ಟಡಿ ಅಂತ್ಯ ಆಗಿದ್ದು ಇವತ್ತು ಪೊಲೀಸರು 24ನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. ಈಗಾಗಲೇ ಸಂಪೂರ್ಣ ವಿಚಾರಣೆ ಮುಗಿದಿರೋದ್ರಿಂದ ಪೊಲೀಸರು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಬಹುತೇಕ ಕಡಿಮೆ ಇದೆ. ಹೀಗಾಗಿ ನಾಲ್ವರು ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರುವುದು ಪಕ್ಕಾ ಎನ್ನಲಾಗಿದೆ.