ಇಂದು ಭಾರತ, ನ್ಯೂಜಿಲೆಂಡ್ ಬಿಗ್ ಫೈಟ್ ನಡೆಯಲಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಹೈವೋಲ್ಟೇಜ್ ಪಮದ್ಯ ಇಂದು ದುಬೈನಲ್ಲಿ ನಡೆಯಲಿದೆ. ಇದು ಚಾಂಪಿಯನ್ಸ್ ಟ್ರೋಫಿ “ಎ” ಗುಂಪಿನ ಪಂದ್ಯವಾಗಿರಲಿದೆ. ಅಲ್ಲದೆ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯವೂ ಆಗಿರಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಈ ಗುಂಪಿನಲ್ಲಿ ಅಗ್ರ ಸ್ಥಾನೀಯವಾಗಿ ಸೆಮೀಸ್ ಪ್ರವೇಶವನ್ನು ಮಾಡುತ್ತದೆ.
ಎರಡೂ ತಂಡಗಳು ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳು. ಎರಡೂ ತಂಡದಲ್ಲಿ ಸ್ಟಾರ್ಗಳು ಇದ್ದಾರೆ. ಅಲ್ಲದೆ ಸದ್ಯ ಎಲ್ಲ ಆಟಗಾರರು ಒಳ್ಳೆಯ ಟಚ್ನಲ್ಲಿದ್ದಾರೆ. ಟೀಮ್ ಇಂಡಿಯಾ ಸಹ ಈ ಪಂದ್ಯದಲ್ಲಿ ಜಯ ಸಾಧಿಸುವ ಪ್ಲ್ಯಾನ್ ಮಾಡಿಕೊಂಡಿದ್ದು, ಬಲಿಷ್ಠ ತಂಡವನ್ನು ಎದುರಿಸಲಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಪಿಚ್ ಸ್ಪಿನ್ನರ್ಗಳಿಗೆ ಅನುಕೂಲ ನೀಡುವ ಸಾಧ್ಯತೆ ಇದೆ ಎಂದು ನಂಬಲಾಗಿದೆ. ಈ ಪಿಚ್ನಲ್ಲಿ ಬ್ಯಾಟರ್ಗಳು ರನ್ ಗಳಿಸುವುದು ಕಷ್ಟ. ಹೀಗಾಗಿ ಇಲ್ಲಿ ಕಡಿಮೆ ಸ್ಕೋರ್ ಪಂದ್ಯವನ್ನು ನೀರಿಕ್ಷಿಸಬಹುದಾಗಿದೆ. ವೇಗದ ಬೌಲರ್ಗಳಿಗೆ ಹೊಸ ಚೆಂಡಿನಲ್ಲಿ ನೆರವು ಸಿಗಲಿದೆ. ಸಮಯ ಕಳೆದಂತೆ ಸ್ಪಿನ್ ಬೌಲರ್ಗಳು ಸಹ ಅಬ್ಬರಿಸಬಲ್ಲರು. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇದುವರೆಗೆ ಒಟ್ಟು 60 ಏಕದಿನ ಪಂದ್ಯಗಳನ್ನು ಆಡಲಾಗಿದ್ದು, ಅವುಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 22 ಪಂದ್ಯಗಳನ್ನು, ಎರಡನೆ ಬಾರಿಗೆ ಬ್ಯಾಟ್ ಮಾಡಿದ ತಂಡ 36 ಪಂದ್ಯಗಳನ್ನು ಗೆದ್ದಿದೆ.
ಟೀಮ್ ಇಂಡಿಯಾ ಈ ಪಂದ್ಯದಲ್ಲಿ ತನ್ನ ಬೆಂಚ್ ಸ್ಟ್ರೆಂತ್ ಉಪಯೋಗಿಸುವ ಇರಾದೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಟೀಮ್ ಇಂಡಿಯಾ ಕೆಲವು ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಇವರಿಬ್ಬರ ಸ್ಥಾನದಲ್ಲಿ ಅರ್ಷದೀಪ್ ಸಿಂಗ್ ಹಾಗೂ ರಿಷಭ್ ಪಂತ್ ತಂಡವನ್ನು ಸೇರಬಹುದಾಗಿದೆ. ಇನ್ನು ಉಳಿದಂತೆ ಭಾರತ ತಂಡದಲ್ಲಿ ಯಾವುದೆ ಬದಲಾವಣೆ ಕಾಣುವುದಿಲ್ಲ. ರೋಹಿತ್ ಒಂದು ವೇಳೆ ಈ ಪಂದ್ಯದಿಂದ ದೂರ ಉಳಿದರೆ ಇವರ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಅವರು ಇನಿಂಗ್ಸ್ ಆರಂಭಿಸಬಹುದಾಗಿದೆ.