ಟಾಲಿವುಡ್ ನಟ ಮಂಚು ಮನೋಜ್ ಇತ್ತೀಚೆಗೆ ತಮ್ಮ ಖಾಸಗಿ ವಿಚಾರವಾಗಿಯೇ ಹೆಚ್ಚು ಹೆಚ್ಚು ಸುದ್ದಿಯಾಗ್ತಿದ್ದಾರೆ. ಇದೀಗ ಮಂಚು ಮನೋಜ್ ಅವರನ್ನು ತಿರುಪತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಿರುಪತಿಯಲ್ಲಿ ಸೋಮವಾರ (ಫೆಬ್ರವರಿ 17) ರಾತ್ರಿ ಅವರನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಆಗಿದೆ. ಈಗ ಮಂಚು ಮನೋಜ್ ಅವರು ಬಾಕರಪೇಟ್ ಪೊಲೀಸರ ವಶದಲ್ಲಿ ಇದ್ದಾರೆ. ಆದರೆ ಅವರನ್ನು ಪೋಲಿಸರು ಕರೆದುಕೊಂಡು ಹೋಗಲು ಕಾರಣ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಪೊಲೀಸರ ಜೊತೆ ಮಂಚು ಮನೋಜ್ ಮಾತನಾಡುತ್ತಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಂಚು ಮನೋಜ್ ಮತ್ತು ಅವರ ಪತ್ನಿ ಭುಮಾ ಮೌನಿಕಾ ಅವರು ತಿರುಪತಿಗೆ ತೆರಳಿದ್ದರು. ಅಲ್ಲಿನ ಚಂದ್ರಗಿರಿಯಲ್ಲಿ ನಡೆದ ಜಲ್ಲಿಕಟ್ಟು ಆಚರಣೆಯಲ್ಲಿ ಅವರು ಪಾಲ್ಗೊಂಡರು. ಆ ಸಮಾರಂಭಕ್ಕೆ ಮಂಚು ಮನೋಜ್ ಅವರು ಮುಖ್ಯ ಅತಿಥಿ ಆಗಿದ್ದರು. ಟಿಡಿಪಿ ಮತ್ತು ಜನಸೇನಾ ಪಕ್ಷದ ಬೆಂಬಲಿಗರಿಂದ ಮಂಚು ಮನೋಜ್ ಅವರಿಗೆ ಸ್ವಾಗತ ಕೋರಲಾಗಿತ್ತು. ಆದರೆ ನಂತರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
ತಿರುಪತಿಗೆ ಭೇಟಿ ನೀಡಿದ್ದಾಗ ಮಂಚು ಮನೋಜ್ ಅವರು ಆಂಧ್ರ ಪ್ರದೇಶ ಸಚಿವ ನಾರಾ ಲೋಕೇಶ್ ಅವರನ್ನು ಭೇಟಿ ಆಗಿದ್ದರು ಎನ್ನಲಾಗಿದೆ. ತಂದೆ ಮೋಹನ್ ಬಾಬು ಮತ್ತು ಸಹೋದರ ಮಂಚು ವಿಷ್ಣು ಜೊತೆ ಎದುರಾಗಿರುವ ಬಿಕ್ಕಟ್ಟು ಪರಿಹಾರ ಮಾಡಲು ನಾರಾ ಲೋಕೇಶ್ ಬಳಿ ಮಂಚು ಮನೋಜ್ ಸಹಾಯ ಕೇಳಿದ್ದಾರೆ ಎಂಬ ಮಾಹಿತಿ ಇದೆ.
ನಾರಾ ಲೋಕೇಶ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಂಚು ಮನೋಜ್ ಅವರು ಮಾತನಾಡಿದ್ದರು. ‘ಯಾರೊಬ್ಬರ ರಾಜಕೀಯದ ಭವಿಷ್ಯವನ್ನು ಊಹಿಸಲು ಸಾಧ್ಯವಿಲ್ಲ. ಅದು ನಮ್ಮ ಕೈಯಲ್ಲಿ ಇಲ್ಲ. ಅದು ದೇವರ ಕೈಯಲ್ಲಿ ಇದೆ’ ಎಂದಿದ್ದರು.