ಧಾರವಾಡ: ಚುನಾವಣಾಧಿಕಾರಿ ಮಾತಿನಿಂದ ಬೇಸತ್ತು ಬಿಎಲ್ಓ ಒಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಲ್ಲಿ ಕಿರಿಯ ಸಹಾಯಕ ಕ್ಲರ್ಕ್ ಆಗಿ ಕೆಲಸ ಮಾಡುತ್ತಿರುವ ಆತ್ಮಾನಂದ ಬಡಿಗೇರ ಎಂಬುವವರೇ ಇದೀಗ ಆತ್ಮಹತ್ಯೆಗೆ ಯತ್ನಿಸಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆತ್ಮಾನಂದ ಬಡಿಗೇರ ಅವರನ್ನು ಜಿಲ್ಲಾಧಿಕಾರಿಗಳು ಚುನಾವಣಾ ಬಿಎಲ್ಓ (ಬೂತ್ ಮಟ್ಟದ ಚುನಾವಣಾಧಿಕಾರಿ) ಆಗಿ ನೇಮಕ ಮಾಡಿದ್ದರು. ಸದ್ಯ ಕಾಲೇಜಿನಲ್ಲಿ ಸೆಮಿಸ್ಟರ್ ಪ್ರವೇಶಾತಿ ಆರಂಭವಾಗಿದ್ದರಿಂದ ಆ ಕೆಲಸ ಮುಗಿಸಿಕೊಂಡು ಆತ್ಮಾನಂದ ಅವರು, ಪಾಲಿಕೆಯಲ್ಲಿ ನಡೆದಿದ್ದ ಚುನಾವಣಾ ಸಭೆಗೆ ತಡವಾಗಿ ಹಾಜರಾಗಿದ್ದರು. ಆ ವೇಳೆ ಪಾಲಿಕೆ ಚುನಾವಣಾಧಿಕಾರಿ ಸಭೆಯಲ್ಲಿಯೇ ಆತ್ಮಾನಂದ ಅವರನ್ನು ತಡವಾಗಿ ಬಂದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.
Kambala: ಬೆಂಗಳೂರಲ್ಲಿ ಅದ್ದೂರಿಯಾಗಿ ನ. 25, 26ರಂದು ನಡೆಯಲಿರುವ ನಮ್ಮ ಕಂಬಳ: ಹೇಗಿದೆ ಸಿದ್ಧತೆ!
ಚುನಾವಣಾಧಿಕಾರಿ ನಿಂದಿಸಿದ್ದರಿಂದ ಮನನೊಂದ ಆತ್ಮಾನಂದ ಮನೆಗೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ನಡೆದು ಒಂದು ವಾರವಾಗಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಕೇವಲ ಎಂಎಲ್ಸಿಯನ್ನಷ್ಟೇ ಮಾಡಿಸಲಾಗಿದ್ದು, ಪ್ರಕರಣ ದಾಖಲಾಗಿಲ್ಲ. ಕಾಲೇಜು ಕೆಲಸ ಮತ್ತು ಚುನಾವಣಾ ಕೆಲಸವನ್ನೂ ಮಾಡುವಂತೆ ಚುನಾವಣಾಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ಕವಿವಿ ವ್ಯಾಪ್ತಿಯ ಸಿಬ್ಬಂದಿಯನ್ನು ಬಳಕೆ ಮಾಡಬಾರದು. ಮೊದಲೇ ಕವಿವಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಕೆಲಸದ ಒತ್ತಡವೂ ಹೆಚ್ಚಿಗೆ ಇದೆ. ಇಂತಹ ಸಮಯದಲ್ಲಿ ಕವಿವಿ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು. ಆತ್ಮಾನಂದ ಬಡಿಗೇರ ಅವರ ಆಸ್ಪತ್ರೆ ವೆಚ್ಚವನ್ನು ಜಿಲ್ಲಾಡಳಿತವೇ ಭರಿಸಬೇಕು ಎಂದು ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಮುಖಂಡ ರಾಬರ್ಟ್ ದದ್ದಾಪುರಿ ಒತ್ತಾಯಿಸಿದ್ದಾರೆ. ಅಲ್ಲದೇ ಆಸ್ಪತ್ರೆಗೆ ತೆರಳಿ ಆತ್ಮಾನಂದ ಅವರಿಗೆ ರಾಬರ್ಟ್ ಅವರು ಧೈರ್ಯ ಸಹ ಹೇಳಿದ್ದಾರೆ.