ನವದೆಹಲಿ: ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವವರಿಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು ದುಪ್ಪಟ್ಟು ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ದೆಹಲಿಯ ಎನ್ಸಿಆರ್ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿರುವ ಸಂಬಂಧ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ, ನಿಯಮಗಳಿಗೆ ಸರ್ಕಾರ ತಿದ್ದುಪಡಿ ತಂದಿದೆ.
ದಂಡದ ಪ್ರಮಾಣ ಎಷ್ಟು?
ಹೊಸ ನಿಯಮಗಳ ಪ್ರಕಾರ, ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು 5,000 ರೂ., 2 ಎಕರೆಗಿಂತ ಹೆಚ್ಚು ಮತ್ತು 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು 10,000 ರೂ. ಹಾಗೂ 10 ಎಕರೆಗಿಂತಲೂ ಅಧಿಕ ಜಮೀನು ಹೊಂದಿರುವವರು 30,000 ರೂ. ಪರಿಸರ ಪರಿಹಾರ ಪಾವತಿಸಬೇಕಾಗುತ್ತದೆ.
PMKSY: ರೈತರೇ ಗಮನಿಸಿ.. “ಕೃಷಿ ಸಿಂಚಾಯಿ ಯೋಜನೆ”ಯಡಿಯಲ್ಲಿ ನಿಮಗೆ ಸಿಗಲಿದೆ ಶೇ. 90 ರಷ್ಟು ಸಹಾಯ ಧನ!
ಗಾಳಿಯ ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ದೆಹಲಿಯ ಆನಂದ್ ವಿಹಾರ, ಅಶೋಕ ವಿಹಾರ, ಬವಾನ, ಜಹಾಂಗಿರ್ಪುರಿ, ಮುಂಡ್ಯಾ, ರೋಹಿಣಿ, ಸೋನಿಯಾ ವಿಹಾ. ವಿವೇಕ್ ವಿಹಾರ, ವಾಝಿಪುರದಲ್ಲಿ ನವೆಂಬರ್ 7ರ ಬೆಳಿಗ್ಗೆ 9ರ ಹೊತ್ತಿಗೆ 367ಕ್ಕೆ ಕುಸಿದಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಎಕ್ಯೂಐ ಮಟ್ಟವು ಶೂನ್ಯದಿಂದ 50 ರಷ್ಟಿದ್ದರೆ ಉತ್ತಮ, 51 ರಿಂದ 100 ರಷ್ಟಿದ್ದರೆ ಸಮಾಧಾನಕರ, 101 ರಿಂದ 200 ರಷ್ಟಿದ್ದರೆ ಸಾಧಾರಣ, 201 ರಿಂದ 300 ರಷ್ಟಿದ್ದರೆ ಕಳಪೆ ಹಾಗೂ 301 ರಿಂದ 400 ರಷ್ಟಿದ್ದರೆ ಅತ್ಯಂತ ಕಳಪೆ,
401 ರಿಂದ 450ರಷ್ಟು ಕಂಡು ಬಂದರೆ ತೀವ್ರ ಕಳಪೆ ಹಾಗೂ 450ಕ್ಕಿಂತ ಹೆಚ್ಚಾದರೆ ಅತ್ಯಂತ ಅಪಾಯಕಾರಿ ಎಂದು ವರ್ಗೀಕರಿಸಲಾಗುತ್ತದೆ. ದೆಹಲಿಯಲ್ಲಿ ಸತತವಾಗಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ವಹಣೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿತ್ತು. ಹೀಗಾಗಿ ಕೇಂದ್ರ ಸರ್ಕಾರ ದಂಡದ ಪ್ರಮಾಣ ದುಪ್ಪಟ್ಟು ಮಾಡಿ ಆದೇಶ ಹೊರಡಿಸಿದೆ.