ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಅಲಭ್ಯವಾಗಿರುವುದರಿಂದ, ಆರ್ಸಿಬಿ ತಂಡದ ಮತ್ತೊಬ್ಬ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್ ಅವರು ಭಾರತೀಯ ರೆಡ್-ಬಾಲ್ ತಂಡಕ್ಕೆ ತಮ್ಮ ಚೊಚ್ಚಲ ಕರೆಯನ್ನು ಸ್ವೀಕರಿಸಿದ್ದಾರೆ.
ಬಲಗೈ ಬ್ಯಾಟರ್ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ ಎಂದರೆ, ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರನ್ನು ನಿರ್ಲಕ್ಷಿಸಲಾಗಿದೆ ಎಂದರ್ಥ. ಇದೇ ವೇಳೆ ಯುವ ಬ್ಯಾಟರ್ ಸರ್ಫರಾಜ್ ಖಾನ್ ಅವರ ಕಾಯುವಿಕೆ ಮುಂದುವರೆದಿದೆ.
30 ವರ್ಷದ ರಜತ್ ಪಾಟಿದಾರ್ ಇತ್ತೀಚಿಗೆ ಉತ್ತಮ ಫಾರ್ಮ್ನಲ್ಲಿದ್ದಾರೆ. ಮೊದಲ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಎ ತಂಡದ ಪರ ಇಂಗ್ಲೆಂಡ್ ಲಯನ್ಸ್ ವಿರುದ್ಧ 151 ರನ್ ಗಳಿಸಿರುವುದು ಸಾಕ್ಷಿಯಾಗಿದೆ.
ಇಂದೋರ್ ಮೂಲದ ಕ್ರಿಕೆಟಿಗ ರಜತ್ ಪಾಟಿದಾರ್ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿ 111 ರನ್ ಗಳಿಸಿದರು ಮತ್ತು ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತ ಎ ತಂಡದ ಭಾಗವಾಗಿದ್ದರು.
ಇನ್ನು ಮಂಗಳವಾರ, ಜನವರಿ 23ರಂದೇ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅಂತಿಮ ಎರಡು ಪಂದ್ಯಗಳಿಗೆ ರಿಂಕು ಸಿಂಗ್ ಅವರನ್ನು ಭಾರತ ಎ ತಂಡಕ್ಕೆ ಆಯ್ಕೆ ಮಾಡಲಾಯಿತು. ಇದು ಬಲಗೈ ಬ್ಯಾಟರ್ ರಜತ್ ಪಾಟಿದಾರ್ ಭಾರತ ಹಿರಿಯ ಪುರುಷರ ತಂಡಕ್ಕೆ ಸೇರ್ಪಡೆಗೊಳ್ಳಲು ದಾರಿ ಮಾಡಿಕೊಟ್ಟಿತು. ರಜತ್ ಪಾಟಿದಾರ್ ಅವರು 55 ಪ್ರಥಮ ದರ್ಜೆ ಪಂದ್ಯಗಳಲ್ಲಿ 45.97ರ ಸರಾಸರಿಯಲ್ಲಿ 4000 ರನ್ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 196ರ ಗರಿಷ್ಠ ಸ್ಕೋರ್ ಜೊತೆಗೆ 12 ಶತಕಗಳನ್ನು ಗಳಿಸಿದ್ದಾರೆ.
30 ವರ್ಷದ ರಜತ್ ಪಾಟಿದಾರ್ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನು ಪಾರ್ಲ್ನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಭಾರತದ ಇತ್ತೀಚಿನ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಸಂದರ್ಭದಲ್ಲಿ ಆಡಿದರು.
ರಜತ್ ಪಾಟಿದಾರ್ ಮತ್ತು ಸಾಯಿ ಸುದರ್ಶನ್ ಭಾರತದ ಇನ್ನಿಂಗ್ಸ್ ಆರಂಭಿಸಿದರು. ಆರ್ಸಿಬಿ ಬ್ಯಾಟರ್ 16 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಮೂಲಕ 22 ರನ್ ಗಳಿಸಿದರು. ಆದಾಗ್ಯೂ, ಹೈದರಾಬಾದ್ನಲ್ಲಿ ಇಂಗ್ಲೆಂಡ್ ವಿರುದ್ಧದ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡರೆ, ರಜತ್ ಪಾಟಿದಾರ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ.
2022ರ ಐಪಿಎಲ್ನಲ್ಲಿ ರಜತ್ ಪಾಟಿದಾರ್ ಅವರು ಏಳು ಇನ್ನಿಂಗ್ಸ್ಗಳಲ್ಲಿ 55.50ರ ಸರಾಸರಿ ಮತ್ತು 152.75ರ ಸ್ಟ್ರೈಕ್ರೇಟ್ನಲ್ಲಿ 333 ರನ್ಗಳನ್ನು ಒಟ್ಟುಗೂಡಿಸಿದ ನಂತರ ಬೆಳಕಿಗೆ ಬಂದರು.