ಹುಬ್ಬಳ್ಳಿ:- ಸರ್ಕಾರದ ಬೊಕ್ಕಸ ಬರಿದಾಗಿ ಕಳಪೆ ಔಷಧಿ ಖರೀದಿ ಮಾಡಿರುವುದೇ ಬಾಣಂತಿಯರ ಸಾವಿಗೆ ಕಾರಣ ಎಂದು ಪ್ರಹ್ಲಾದ್ ಜೋಶಿ ಆರೋಪ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ರಾಜ್ಯ ಸರ್ಕಾರ ಆರ್ಥಿಕ, ಬೌದ್ಧಿಕವಾಗಿ ದಿವಾಳಿಯಾಗಿದೆ. ಸರ್ಕಾರದ ಬೊಕ್ಕಸ ಬರಿದಾಗಿದೆ. ಗುಣಮಟ್ಟದ ಔಷಧಿ ಖರೀದಿ ಮಾಡಲೂ ದುಡ್ಡಿಲ್ಲ. ಕಳಪೆ ಔಷಧಿ ಪೂರೈಕೆ ಕಂಪನಿಗಳಿಂದ ಖರೀದಿಸುತ್ತಿದೆ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಯೇ ಲಭ್ಯವಿಲ್ಲ. ವೈದ್ಯರು ಹೊರಗಡೆ ತರಲು ಚೀಟಿ ಬರೆದು ಕೊಡುತ್ತಿದ್ದಾರೆ. ರಾಜ್ಯವನ್ನು ಇಂಥ ಅವಸ್ಥೆಗೆ ತಂದಿಟ್ಟಿದೆ ಈ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸಿದೆ. ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರಿಗೆ ಕೆಟ್ಟ ಮೇಲೆ ಬುದ್ಧಿ ಬಂದಂತಿದೆ. ಈಗ ಪ್ರಕರಣದ ಗಂಭೀರತೆ, ಸೂಕ್ಷ್ಮತೆ ಅರಿತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಬಾಣಂತಿಯರ ಸಾವಿನ ಪ್ರಕರಣದಲ್ಲಿ ಆರೋಗ್ಯ ಸಚಿವರು ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರದತ್ತ ಬೆರಳು ತೋರುತ್ತಿದ್ದಾರೆ ಎಂದು ಆರೋಪಿಸಿದರು. ಐವಿ ದ್ರಾವಣಕ್ಕೆ ಕೇಂದ್ರ ಅನುಮತಿ ನೀಡಿದೆ ಎಂದಿದ್ದಾರೆ. ಆದರೆ, ಕೇಂದ್ರದ ಅನುಮತಿ ಪಡೆಯುವಾಗ ಗುಣಮಟ್ಟದ ಔಷಧಿ ಕಳಿಸಿ ನಂತರದಲ್ಲಿ ಕಳಪೆ ಗುಣಮಟ್ಟದ್ದನ್ನು ಪೂರೈಸಿದರೆ ಯಾರು ಹೊಣೆ? ರಾಜ್ಯ ಸರ್ಕಾರ ಆಗಾಗ ತಪಾಸಣೆ ನಡೆಸಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.