ಬೆಳಗಾವಿ:- ಯಾವುದೇ ಸರ್ಕಾರ ಬಂದರೂ ಕನ್ನಡ ಶಾಲೆ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಷ್ಟೇ ಬಂತು. ಏನು ಬದಲಾವಣಗೆ ಮಾಡಲು ಸಾಧ್ಯವಾಗಿಲ್ಲ.
ಕನಿಷ್ಟಪಕ್ಷ ಸರ್ಕಾರಿ ಶಾಲೆ ಮಕ್ಕಳಿಗಾಗಿ ಕುಡಿಯುವ ನೀರು, ಸುಸಜ್ಜಿತ ಶೌಚಾಲಯವಾದರೂ ನಿರ್ಮಿಸಿದ್ದಾರಾ ಎಂದರೆ ಅದೂ ಇಲ್ಲ.
ಇದು ಬಸ್ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯವಲ್ಲ, ಸರ್ಕಾರಿ ಕನ್ನಡ ಶಾಲೆ ಶೌಚಾಲಯ. ಬೆಳಗಾವಿ ತಾಲೂಕಿನ ಕಂಗ್ರಾಳಿ ಖುರ್ದ್ನ ಸರ್ಕಾರಿ ಕನ್ನಡ ಶಾಲೆಯ ದುಸ್ಥಿತಿಯಿದು. ಈ ಸರ್ಕಾರಿ ಶಾಲೆ ಮಕ್ಕಳು ದಿನನಿತ್ಯ ಶೌಚಕ್ಕೂ ಸರತಿ ಸಾಲಿನಲ್ಲಿ ನಿಲ್ಲಬೇಕಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸರ್ಕಾರಿ ಕನ್ನಡ ಶಾಲೆಗಳು ಎಂಥ ದುಸ್ಥಿತಿಗೆ ತಲುಪಿವೆ ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ. ಹೌದು. ಮೊನ್ನೆ ನಂದಿಹಳ್ಳಿ ಗ್ರಾಮದಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಕೊಠಡಿ ಸಮಸ್ಯೆ ಬಗ್ಗೆ ವರದಿಯಾಗಿತ್ತು, ಇದೀಗ ಕನ್ನಡ ಶಾಲೆ ಮಕ್ಕಳು ಶೌಚಕ್ಕೂ ಸಮಸ್ಯೆ.
10 ಜನ ಶಿಕ್ಷಕರು 16 ಕೊಠಡಿಗಳಿರುವ ಈ ಕನ್ನಡ ಶಾಲೆ 1 ರಿಂದ 8 ತರಗತಿಯವರಗೆ ಒಟ್ಟು 354 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೆ, ಮರಾಠಿ ಪ್ರಾಬಲ್ಯ ಇರುವ ಭಾಗದಲ್ಲಿ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ. ಹೀಗಿದ್ದರೂ ಸಹ ಶೌಚಕ್ಕೂ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಇದೆ. ಒಂದು ಕಡೆ ಬಾಲಕಿಯರ ಸರತಿ ಸಾಲು ಇನ್ನೊಂದು ಕಡೆ ಬಾಲಕರ ಸಾಲು. ಹೊರಗೆ ಮೂತ್ರ ವಿಸರ್ಜನೆ ಮಾಡುವ ಅನಿವಾರ್ಯತೆಗೆ ಬಿದ್ದಿರುವ ವಿದ್ಯಾರ್ಥಿಗಳು. ಶೌಚಾಲಯದ ಸಮಸ್ಯೆಯಿಂದ ಶಾಲೆಗೆ ಬರಲು ವಿದ್ಯಾರ್ಥಿನಿಯರು ಹಿಂದೇಟು ಹಾಕುವಂತಾಗಿದೆ. ಅಷ್ಟು ವಿದ್ಯಾರ್ಥಿಗಳು, ಶಿಕ್ಷಕ ಸಿಬ್ಬಂದಿ ಮೂತ್ರ ವಿಸರ್ಜನೆಗೆ ಒಂದೇ ಶೌಚಾಲಯವಿದೆ. ಸರತಿ ಸಾಲಿನಲ್ಲಿ ನಿಂತುಕೊಂಡೇ ವಿಸರ್ಜನೆ ಮಾಡುವ ಪರಿಸ್ಥಿತಿ ಇದೆ. ಒಂದು ಕಡೆ ಬೆಳಗಾವಿಯಲ್ಲಿ ಮರಾಠಿ ಪ್ರಾಬಲ್ಯ ಹೆಚ್ಚುತ್ತಿದ್ದರೆ ಇತ್ತ ಜನಪ್ರತಿನಿಧಿಗಳ ಹೊಣೆಗೇಡಿತನ, ಬೇಜವಾಬ್ದಾರಿಯಿಂದ ಕನಿಷ್ಟ ಮೂಲಭೂತ ಸೌಕರ್ಯ ಇಲ್ಲದೆ ಸೊರಗುತ್ತಿವೆ.