ಮದುವೆ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ಸಾಕಷ್ಟು ಆಸೆ ಕನಸುಗಳಿರುತ್ವೆ.. ನಾನು ಮದ್ವೆ ಆಗೋರು ಹೀಗೆ ಇರಬೇಕು.. ನನ್ನ ಮದ್ವೆ ಇಂಥದ್ದೇ ಸ್ಥಳದಲ್ಲಿ ಆಗ್ಬೇಕು. ಹೀಗೆ ಆಗ್ಬೇಕು ಅಂತಾ ಅಂದುಕೊಂಡಿರ್ತಾರೆ.. ಇತ್ತೀಚಿಗಂತೂ ಹಿಲ್ ಸ್ಟೇಟನ್ಸ್ , ಡೆಸ್ಟಿನೇಷನ್ ವೆಡ್ಡಿಂಗ್ಸ್ಗಳಲ್ಲಿ ಮದ್ವೆ ನಡೆಯೋದು ಜಾಸ್ತಿ ಆಗಿದೆ.. ಆದರೆ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಜೋಡಿಯೊಂದು ಮದುವೆಯಾಗಲಿದೆ..
ಹೌದು, ದೇಶದ ಅತಿದೊಡ್ಡ ಸರ್ಕಾರಿ ಬಂಗಲೆ ಭಾರತದ ರಾಷ್ಟ್ರಪತಿ ಭವನ.. ಇಲ್ಲಿ ಕೇವಲ ಸರ್ಕಾರಿ ಕಾರ್ಯಕ್ರಮಗಳಿಗಷ್ಟೇ ಸೀಮಿತ.. ಆದರೆ ಇದೀಗ ಇದೇ ಮೊದಲ ಬಾರಿಗೆ ಮದುವೆ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಭವನ ಸಜ್ಜಾಗಲಿದೆ.. ಎಸ್.. ರಾಷ್ಟ್ರಪತಿ ದ್ರೌಪದಿ ಮುರ್ಮುರ ಖಾಸಗಿ ಭದ್ರತಾ ಸಿಬ್ಬಂದಿಯಾಗಿರುವ ಸಿಆರ್ಪಿಫ್ ಅಸಿಸ್ಟೆಂಟ್ ಕಮಾಂಡೆಂಟ್ ಪೂನಂ ಗುಪ್ತಾ ಮದುವೆ ರಾಷ್ಟ್ರಪತಿ ಭವನದಲ್ಲೇ ನಡೆಸಲು, ಸರ್ಕಾರ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಸಿಆರ್ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಅವನೀಶ್ ಕುಮಾರ್ ಮತ್ತು ಪೂನಂ ಗುಪ್ತಾ ಮದುವೆ ಫೆ.12ರಂದು ನಡೆಯಲಿದೆ. ಸರಿಸುಮಾರು 300 ಎಕ್ರೆ ವ್ಯಾಪ್ತಿಯ ರಾಷ್ಟ್ರಪತಿ ಭವನ ಸಂಕೀರ್ಣದ ಒಳಗಿನ ಮದರ್ ತೆರೆಸಾ ಕ್ರೌನ್ ಕಾಂಪ್ಲೆಕ್ಸ್ನಲ್ಲಿ ಮದುವೆ ಸಮಾರಂಭ ನಡೆಯಲಿದ್ದು, ಕೇವಲ ಹತ್ತಿರದ ಸಂಬಂಧಿಕರಿಗೆ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
ಇನ್ನೂ ಪೂನಂ ಗುಪ್ತಾ ಯಾರು ಅನ್ನೋದನ್ನ ನೋಡೋದಾದರೆ, 2018ರಲ್ಲಿ ಪೂನಂ ಯುಪಿಎಸ್ಸಿ ಸಿಎಪಿಎಫ್ ಪರೀಕ್ಷೆಯಲ್ಲಿ 81 ನೇ ರ್ಯಾಂಕ್ ಗಳಿಸಿದರು. ರಾಷ್ಟ್ರಪತಿ ಭವನಕ್ಕೆ ಪೋಸ್ಟಿಂಗ್ ಆಗುವುದಕ್ಕೂ ಮುನ್ನ ಪೂನಮ್ ಗುಪ್ತಾ ಅವರು ಬಿಹಾರದಲ್ಲಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಕೆಲಸ ಮಾಡಿದ್ದರು. ದಕ್ಷ ಅಧಿಕಾರಿ ಎಂದೇ ಹೆಸರು ಪಡೆದಿರುವ ಪೂನಂ ಈ ಬಾರಿಯ ಗಣರಾಜ್ಯೋತ್ಸವ ಸಂದರ್ಭದ ಪರೇಡ್ನಲ್ಲಿ ಸಂಪೂರ್ಣ ಮಹಿಳಾ ತುಕಡಿಯನ್ನು ಮುನ್ನಡೆಸಿದ್ದರು. ಗಣರಾಜ್ಯೋತ್ಸವ ಪರೇಡ್ ಸಂದರ್ಭದಲ್ಲಿ ಸಿಆರ್ಪಿಎಫ್ ಮಹಿಳೆಯರ ವಿಭಾಗವನ್ನು ಪೂನಂ ಗುಪ್ತಾ ಮುನ್ನಡೆಸಿದ್ದು ದೇಶದ ಗಮನಸೆಳೆದಿತ್ತು.
ಪೂನಂ ಗುಪ್ತಾ ಇನ್ಸ್ಟಾಗ್ರಾಮ್ನಲ್ಲಿಯೂ ಸಹ ತುಂಬಾ ಸಕ್ರಿಯರಾಗಿದ್ದಾರೆ. ಅಲ್ಲಿ ಅವರು ತಮ್ಮ ಸಿಆರ್ಪಿಎಫ್ ಸಮವಸ್ತ್ರದಲ್ಲಿ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮಹಿಳಾ ಸಮಸ್ಯೆಗಳು ಮತ್ತು ಸಬಲೀಕರಣದ ಬಗ್ಗೆ ಉತ್ಸಾಹ ಹೊಂದಿರುವ ಅವರು ಆಗಾಗ್ಗೆ ತಮ್ಮ ಪೋಸ್ಟ್ಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತಾರೆ.
ಇನ್ನೂ ಪೂನಂರನ್ನು ವರಿಸಲಿರುವ ಅವನೀಶ್ ಕುಮಾರ್ ಸಿಆರ್ಪಿಎಫ್ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿದ್ದು, ಜಮ್ಮು ಕಾಶ್ಮೀರ ಮೂಲದವರು. ಪೂನಂ ಗುಪ್ತಾ ಅವರ ಕೋರಿಕೆಯನ್ನು ರಾಷ್ಟ್ರಪತಿ ದ್ರೌಪತಿ ಮುರ್ಮು ಒಪ್ಪಿಕೊಂಡಿದ್ದು, ರಾಷ್ಟ್ರಾಧ್ಯಕ್ಷರ ಬಂಗಲೆಯೊಳಗೆ ಮದುವೆಗೆ ಸಿದ್ಧತೆ ನಡೆಸಿದ್ದಾರೆ.
ವಿವಾಹವಾಗುತ್ತಿರುವ ವ್ಯಕ್ತಿಯ ನಡವಳಿಕೆ ಮತ್ತು ಸೇವೆಯಿಂದ ಪ್ರಭಾವಿತರಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಮದುವೆಗೆ ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ.