ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ. ಇಂದು (ಡಿಸೆಂಬರ್ 18) ಅವರು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅದಕ್ಕೂ ಮುನ್ನ ಸುದೀಪ್, ವಿನೋಜ್ ರಾಜ್ ಸೇರಿದಂತೆ ಹಲವರನ್ನು ಭೇಟಿಯಾದಿ ಶಿವರಾಜ್ ಕುಮಾರ್ ಮನೆಯಿಂದ ವಿಮಾನ ನಿಲ್ದಾಣಕ್ಕೆ ತೆರಳುವಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಶಿವಣ್ಣ ಭಾವುಕರಾಗಿದ್ದಾರೆ.
‘ಎಲ್ಲರಿಗೂ ಇರುವಂಥದ್ದೇ. ನಾವು ಕೂಡ ಸ್ವಲ್ಪ ಎಮೋಷನಲ್ ಆಗುತ್ತೇವೆ. ಅದು ಸಹಜ. ಇಲ್ಲಿ ಪರೀಕ್ಷೆ ಮಾಡಿಸಿದಾಗ ಎಲ್ಲ ಲಕ್ಷಣಗಳು ಚೆನ್ನಾಗಿವೆ. ಆದರೂ ಕೂಡ ಒಂದು ಆತಂಕ ಇದ್ದೇ ಇರುತ್ತದೆ. ಮನೆಯಿಂದ ಹೋಗುತ್ತಿದ್ದೇವಲ್ಲ.. ತಂಗಿ ಹಾಗೂ ಸಂಬಂಧಿಕರನ್ನೆಲ್ಲ ನೋಡುವಾಗ ಸ್ವಲ್ಪ ಎಮೋಷನಲ್ ಆಯಿತು. ಅಭಿಮಾನಿಗಳು ಕೂಡ ಇದ್ದಾರೆ. ಸ್ವಲ್ಪ ದುಃಖ ಆಗಿದೆ ಹೊರತೂ ಇನ್ನೇನೂ ಇಲ್ಲ’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
‘ನಾನು ಆತ್ಮವಿಶ್ವಾಸದಿಂದ ಇದ್ದೇನೆ. ಡಿಸೆಂಬರ್ 24ರಂದು ಸರ್ಜರಿ ನಡೆಯುತ್ತದೆ. ಅದರ ಬಗ್ಗೆ ಏನೂ ಯೋಚನೆ ಇಲ್ಲ. ಕಡಿಮೆ ಅವಧಿ ಆದರೆ ಪರವಾಗಿಲ್ಲ. ಆದರೆ 35 ದಿನ ಮನೆಯಿಂದ, ಭಾರತದಿಂದ ಹೊರಗೆ ಇರುತ್ತೇನೆ ಎಂಬ ನೋವು ಇರುತ್ತದೆ. ಎಲ್ಲರ ಹಾರೈಕೆ ಇದೆ. ಅಭಿಮಾನಿಗಳು, ಮಾಧ್ಯಮದವರು ಕಾಳಜಿ ತೋರಿಸಿದ್ದಾರೆ. ಆರೋಗ್ಯ ಸಮಸ್ಯೆ ಇದೆ ಎಂಬುದು ಗೊತ್ತಿದ್ದರೂ ಕೂಡ ಯಾರೂ ಅದನ್ನು ವೈಭವಿಕರಿಸಿಲ್ಲ. ಅದು ನನಗೆ ಖುಷಿ ಕೊಟ್ಟಿದೆ. ಅಷ್ಟು ಪ್ರೀತಿ ಮತ್ತು ಗೌರವ ನನ್ನ ಮೇಲೆ ಇಟ್ಟಿದ್ದಾರೆ’ ಎಂದಿದ್ದಾರೆ ಶಿವರಾಜ್ಕುಮಾರ್ ಭಾವುಕರಾದರು.
ಶಿವರಾಜ್ಕುಮಾರ್ ಅವರ ಕೈಯಲ್ಲಿ ಹಲವು ಸಿನಿಮಾಗಳು ಇವೆ. ಆದರೆ ಅನಾರೋಗ್ಯ ಉಂಟಾಗಿರುವುದರಿಂದ ಅವರು ಸದ್ಯಕ್ಕೆ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿದ್ದಾರೆ. ದೇವರಿಗೆ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿ ಮನೆಯಿಂದ ಹೊರಟ್ಟಿದ್ದಾರೆ ಶಿವರಾಜ್ ಕುಮಾರ್. ಶಿವಣ್ಣ ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸ್ತಿದ್ದಾರೆ.