ಬೆಂಗಳೂರು:– ಬಿಜೆಪಿಗೆ ಮರಳಿ ಹೋಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ನನ್ನದು ಮತ್ತು ಬಿಜೆಪಿಯ ಸಂಬಂಧ ಮುಗಿದ ಅಧ್ಯಾಯ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಹಾಗೂ ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಮರಳಿ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಬಿಜೆಪಿಯೊಂದಿಗೆ ನಮ್ಮ ಪಕ್ಷವನ್ನು ವಿಲೀನ ಮಾಡುವುದಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಸ್ಪರ್ಧೆ ಮಾಡ್ತೇವೆ.
ಪಕ್ಷ ಸಂಘಟನೆಯ ಬಳಿಕ ಎಷ್ಟು ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂಬುದನ್ನು ಫೆಬ್ರವರಿಯಲ್ಲಿ ಹೇಳುತ್ತೇವೆ ಎಂದರು. ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಯಾರೂ ಸಂಪರ್ಕ ಮಾಡಿಲ್ಲ. ಶಾಸಕ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಅವರಿಗೆ ಶುಭಾಶಯಗಳನ್ನು ಮಾತ್ರ ಹೇಳಿದ್ದೇನೆ. ಯಾವುದೇ ಹಂತದಲ್ಲೂ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಹೇಳಿದರು.
ಸದ್ಯಕ್ಕೆ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲದೆ ಸ್ವತಂತ್ರವಾಗಿ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಲಾಗುವುದು. ಲೋಕಸಭೆ ಚುನಾವಣೆಗೆ ಎಂಟು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಆದರೆ, ಎಷ್ಟು ಕ್ಷೇತ್ರದಿಂದ ಪಕ್ಷ ಸ್ಪರ್ಧಿಸಬೇಕು ಎಂಬುದರ ಬಗ್ಗೆ ಫೆಬ್ರವರಿಯಲ್ಲಿ ಪ್ರಕಟಿಸಲಾಗುವುದು ಎಂದರು.