ಹಾಸನ : ರಾಜ್ಯ ಬಜೆಟ್ನಲ್ಲಿ ಹಾಸನ ಹೆಸರಿಲ್ಲ ಎಂದು ಟೀಕೆ ಮಾಡಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣಗೆ ಸಂಸದ ಶ್ರೇಯಸ್ ಪಟೇಲ್ ಕೇಂದ್ರ ಬಜೆಟ್ ತೋರಿಸಿ ತಿರುಗೇಟು ನೀಡಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಅವರೇ ಇಲ್ಲಿ ನೋಡಿ ಕೇಂದ್ರ ಬಜೆಟ್ನಲ್ಲಿ ಹಾಸನ ಅಲ್ಲ, ಕರ್ನಾಟಕ ಹೆಸರೇ ಇಲ್ಲ. ಕೇಂದ್ರ ಬಜೆಟ್ನ ಪುಸ್ತಕದಲ್ಲಿ ಕರ್ನಾಟಕ ಸೇರಿ ಎಷ್ಟೋ ರಾಜ್ಯಗಳ ಹೆಸರೇ ಇಲ್ಲ ಎಂದು ಟೀಕಿಸಿದ್ದಾರೆ.
ನಾನೊಬ್ಬ ಜನಪ್ರತಿನಿದಿ ಇದ್ದೀನಿ. ನನಗೆ ಕೇಂದ್ರ ಬಜೆಟ್ ಪುಸ್ತಕ ಕೊಡ್ತಾರೆ, ನನಗಿಂತ ಗೊತ್ತಾ ಅವರಿಗೆ. ಕೇಂದ್ರ ಬಜೆಟ್ ಪುಸ್ತಕದಲ್ಲಿ ಎಷ್ಟೋ ರಾಜ್ಯಗಳ ಹೆಸರಿಲ್ಲ. ಇನ್ನು ಹಾಸನ ಹೆಸರು ಇರುತ್ತಾ.? ರಾಜ್ಯ ಬಜೆಟ್ನಲ್ಲಿ ಹಾಸನ ಜಿಲ್ಲೆಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಸುಮ್ಮನೆ ಇಲ್ಲಸಲ್ಲದ ಹೇಳಿಕೆ ನೀಡಬಾರದು ಎಂದು ತಿರುಗೇಟು ನೀಡಿದರು. ಗಲಾಟೆಯಾದ ಸಂದರ್ಭದಲ್ಲಿ ಪೊಲೀಸರು ನಿಭಾಯಿಸುತ್ತಾರೆ. ಪೊಲೀಸರ ಮೇಲೆ ಇಲ್ಲಸಲ್ಲದ ಆರೋಪ ಮಾಡಬಾರದು ಎಂದು ಹೇಳಿದರು. ಚುನಾವಣೆ ಸಂದರ್ಭದಲ್ಲಿ ಚುನಾವಣೆ ಮಾಡೋಣ. ಹಾಸನ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸಲಹೆ, ಸಹಕಾರ ನೀಡಲಿ ಎಂದರು.
ನಾಲ್ಕೈದು ತಿಂಗಳಿನಲ್ಲಿ ಸರ್ಕಾರ ಬೀಳುತ್ತೆ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳುತ್ತಾ ಬಂದಿದ್ದಾರೆ. ತಿಳಿದವರಿಗೆ, ಬುದ್ದಿವಂತರಿಗೆ ಏನಾದರೂ ಉತ್ತರ ಕೊಡಬಹುದು. ಯಾವ ಮಾನದಂಡದ ಮೇಲೆ ಹೇಳಿದ್ದಾರೆ ಗೊತ್ತಿಲ್ಲ. ನಮ್ಮ ಸರ್ಕಾರ ಅಸ್ಥಿರವಾಗಿದೆಯೇ ನೀವೇ ನೋಡಿ.. ನಮ್ಮಲ್ಲಿ 140 ಜನ ಶಾಸಕರಿದ್ದಾರೆ. ಇಡೀ ರಾಜ್ಯದ ಜನ ಕಾಂಗ್ರೆಸ್ಗೆ ಆಶೀರ್ವಾದ ಮಾಡಿದ್ದಾರೆ. ಏನಾದರೂ ಹೇಳಿಕೊಳ್ಳಲಿ ಬಿಡಿ ಎಂದು ಸೂರಜ್ ರೇವಣ್ಣ ಬಗ್ಗೆ ವ್ಯಂಗ್ಯವಾಡಿದರು.