ಮಂಗಳೂರು:– ರಾಹುಲ್ ಗಾಂಧಿಗೂ, ರಾಹುಕಾಲಕ್ಕೂ ವ್ಯತ್ಯಾಸ ಇಲ್ಲ ಎಂದು ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ,
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೂ ರಾಹುಕಾಲಕ್ಕೂ ವ್ಯತ್ಯಾಸ ಇಲ್ಲ. 55 ವರ್ಷಕ್ಕೂ ಹೆಚ್ಚು ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷಕ್ಕೆ ಇತಿಶ್ರೀ ಹಾಡಿದ್ದು ಇದೇ ರಾಹುಲ್ ಗಾಂಧಿ. ಅವರು ಪಕ್ಷದ ಜವಾಬ್ದಾರಿ ಪಡೆದ ಸಂದರ್ಭದಿಂದ ಕಾಂಗ್ರೆಸ್ ಗೆ ರಾಹುಕಾಲ ಶುರುವಾಗಿದೆ’ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಅವರು ‘ಅಪಶಕುನ’ ಎಂದು ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ‘ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಕ್ರೀಡಾ ಮನೋಭಾವದಿಂದ ಪ್ರಧಾನಿ ಅವರು ಭಾಗವಹಿಸಿದ್ದರು.ಅದಕ್ಕೂ ಪುಣ್ಯಾತ್ಮ ರಾಹುಲ್ ಗಾಂಧಿ, ‘ಮೋದಿ ಬಂದಿದ್ದೇ ಅಪಶಕುನ’ ಎಂದು ಹೇಳಿದ್ದಾರೆ’ ಎಂದರು.
‘ನಾವು ಮಂಗಳ ಕಾರ್ಯ ಶುರುಮಾಡಲು ಒಳ್ಳೆಯ ಕಾಲವನ್ನು ನೋಡುತ್ತೇವೆ. ಯಾರೂ ರಾಹು ಕಾಲದಲ್ಲಿ ಶುಭ ಕೆಲಸ ಮಾಡಲು ಬಯಸುವುದಿಲ್ಲ’ ಎಂದು ಅವರು ವ್ಯಂಗ್ಯವಾಗಿ ಹೇಳಿದರು.
ನಾನು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಇರಬಹುದು. ನಿಮಗೆ ಪ್ರೇರಣೆ ನೀಡಲು ಇಲ್ಲಿಗೆ ಬಂದಿಲ್ಲ. ರಾಜ್ಯದಲ್ಲಿ ಪಕ್ಷಕ್ಕೆ ಭದ್ರ ಬುನಾದಿ ಹಾಕಿದ ಜಿಲ್ಲೆ ಇದ್ದರೆ ಅದು ದಕ್ಷಿಣ ಕನ್ನಡ. ಇಲ್ಲಿನ ವಿ.ಎಸ್.ಆಚಾರ್ಯ, ನಾರಾಯಣ ಶೆಟ್ಟಿ ಅವರಂತಹ ನಾಯಕರ ಪರಿಶ್ರಮದ ಫಲವಾಗಿ ಬಿಜೆಪಿಗೆ ಇಲ್ಲಿ ನೆಲೆ ಸಿಕ್ಕಿದೆ. ಕಾರ್ಯಕರ್ತರ ಪರಿಶ್ರಮದ ಫಲವಿದು’ ಎಂದರು.
‘ನನಗೆ ಪಕ್ಷದ ರಾಜ್ಯ ಘಟಕದ ಜವಾಬ್ದಾರಿ ನೀಡಿದ್ದು, ನಾನು ಯಡಿಯೂರಪ್ಪ ಅವರ ಮಗ ಎಂಬ ಕಾರಣಕ್ಕೆ ಅಲ್ಲ.’ ಎಂದು ಸ್ಪಷ್ಟಪಡಿಸಿದರು.