ಬೆಂಗಳೂರು:- ರಾಜ್ಯದಲ್ಲಿರುವುದು ಸಂಕಷ್ಟಕ್ಕೆ ಬಾರದ ನಿಷ್ಪ್ರಯೋಜಕ ಸರ್ಕಾರ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಸಂಬಂಧ X ಮಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ರಾಜ್ಯದ ರೈತರಿಗೆ ಬರ ಪರಿಹಾರವಾಗಿ ಕೇವಲ 105 ಕೋಟಿ ರೂ. ಬಿಡುಗಡೆ ಮಾಡಲು ರಾಜ್ಯದ ರೈತರನ್ನು ಆರು ತಿಂಗಳು ಸತಾಬೇಕಾಗಿತ್ತಾ. 123 ತಾಲೂಕುಗಳು ಬರ ಪೀಡಿತ ಎಂದು ನೀವೇ ಘೋಷಣೆ ಮಾಡಿದ್ದು, ಅಷ್ಟು ದೊಡ್ಡ ಮಟ್ಟದ ಬರಕ್ಕೆ ಪ್ರತಿ ಹೆಕ್ಟೇರ್ ಗೆ ಕೇವಲ 2000 ರೂ. ನೀಡುತ್ತಿರುವುದೇಕೆ ?
ರೈತರ ಖಾತೆಗಳಿಗೆ ಆಧಾರ ಲಿಂಕ್ ಆಗಿರುವ ಸತ್ಯ ಹೊರಬರುತ್ತಿದ್ದಂತೆ, ತಕ್ಷಣ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಲು ಆದೇಶ ಮಾಡಿದ್ದು, ನೀವು ರಾಜಕಾರಣಕ್ಕಾಗಿ, ವಿಳಂಬ ಧೋರಣೆ ಅನುಸರಿಸಲು ಆಧಾರ್ ಲಿಂಕ್ ಮಾಡುವ ಸುಳ್ಳು ಕಥೆ ಹೇಳಿದ್ದೀರಿ ಎನ್ನುವುದು. ನಿಮ್ಮ ನಡೆಯಿಂದ ಸ್ಪಷ್ಟವಾಗುತ್ತದೆ.
ರಾಜ್ಯದ 69 ಲಕ್ಷ ರೈತರ ಖಾತೆಗಳಿಗೆ ಆಧಾರ್ ಲಿಂಕ್ ಮಾಡಿರುವ ಮಾಹಿತಿ ಸರ್ಕಾರದ ಬಳಿ ಇದ್ದರೂ, ಸುಳ್ಳು ಹೇಳಿ ಜನರ ದಾರಿ ತಪ್ಪಿಸಿದ ಉದ್ದೇಶವೇನು ? ನಮ್ಮ ಅವಧಿಯಲ್ಲಿ 2022-23 ನೇ ಸಾಲಿನಲ್ಲಿ ಪ್ರವಾಹದಿಂದ 13.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾದ ಬೆಳೆಗೆ 14.63 ಲಕ್ಷ ರೈತರ ಖಾತೆಗೆ ನೇರವಾಗಿ 2,031 ಕೋಟಿ ರೂ.ಗಳನ್ನು 2 ತಿಂಗಳೊಳಗೆ ಜಮೆ ಮಾಡಲಾಗಿತ್ತು.
ನಮ್ಮ ಅವಧಿಯಲ್ಲಿ ಪ್ರವಾಹದಿಂದ ಬೆಳೆ ಹಾನಿಯಾಗಿದ್ದಾಗ ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಕಾಯದೇ ರಾಜ್ಯ ಸರ್ಕಾರವೇ ಎಸ್ಡಿಆರ್ಎಫ್ ಮಾರ್ಗಸೂಚಿ ದರಕ್ಕಿಂತಲೂ ಎರಡು ಪಟ್ಟು ಹೆಚ್ಚಳ ಮಾಡಿ ಮಳೆಯಾಶ್ರಿತ ಪ್ರದೇಶದ ಬೆಳೆ ಹಾನಿಗೆ ಎಸ್ಡಿಆರ್ಎಫ್ ದರ 6,800 ಇದ್ದರೆ, ನಮ್ಮ ಸರ್ಕಾರ 13,600 ರೂ.ಗಳನ್ನು ಪರಿಹಾರ ನೀಡಿದ್ದೇವು. ನೀರಾವರಿ ಜಮೀನಿಗೆ ಎಸ್ಡಿಆರ್ಎಫ್ ಮಾರ್ಗಸೂಚಿ ದರ 13,500 ಇದ್ದರೆ, ನಮ್ಮ ಸರ್ಕಾರದಿಂದ 25000 ರೂ. ಪರಿಹಾರ ನೀಡಿದ್ದೇವು. ತೋಟಗಾರಿಕಾ ಬೆಳೆ ಹಾನಿಗೆ ಎಸ್ಡಿಆರ್ಎಫ್ ಮಾರ್ಗಸೂಚಿ ದರ 18,000 ರೂ. ಇದ್ದರೆ, ನಾವು 28,000 ರೂ. ಪರಿಹಾರ ನೀಡಿದ್ದೇವು.
ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಕನಿಷ್ಟ 50000 ದಿಂದ 5 ಲಕ್ಷದ ವರೆಗೆ ರಾಜ್ಯ ಸರ್ಕಾರದಿಂದಲೇ ಪರಿಹಾರ ನೀಡಿದ್ದೇವು. ಇದು ಎಸ್ಡಿಆರ್ಎಫ್, ಎನ್ಡಿಆರ್ಎಫ್ ಮಾರ್ಗಸೂಚಿ ದರಕ್ಕಿಂತ ಹೆಚ್ಚು. ಪ್ರವಾಹದಿಂದ ಬಾದಿತರಾದ ಸಂತ್ರಸ್ತರ ನೆರವಿಗೆ ಪರಿಷ್ಕೃತ ದರದಂತೆ ರಾಜ್ಯ ಸರ್ಕಾರ 3326 ಕೋಟಿ ರೂ. ವೆಚ್ಚ ಮಾಡಿತ್ತು. ಅಲ್ಲದೇ ಮೂಲ ಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ. ಬಿಡುಗಡೆ ಮಾಡಿದ್ದೇವು.
ರಾಜ್ಯದ ಜನರ ಸಂಕಷ್ಟದ ಬಗ್ಗೆ ಕಾಳಜಿ ಇರುವ ಯಾವ ಮುಖ್ಯಮಂತ್ರಿಯೂ ತನ್ನ ತಪ್ಪು ಮುಚ್ಚಿಕೊಳ್ಳಲು ಬೇರೆಯವರ ಕಡೆಗೆ ಬೆರಳು ಮಾಡಿ ತೋರಿಸುವುದಿಲ್ಲ. ತಮ್ಮ ಗ್ಯಾರೆಂಟಿ ಯೋಜನೆಗಳೂ ಅಸಮರ್ಪಕವಾಗಿದ್ದು, ನಿಜವಾದ ಫಲಾನುಭವಿಗಳಿಗೆ ತಲುಪಿಸದೇ ತಾಂತ್ರಿಕ ತೊಂದರೆಯ ಕಾರಣ ಹೇಳುತ್ತಿದ್ದೀರಿ.
ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಹಣ ಇದ್ದರೂ, ಅದನ್ನು ಬಿಡುಗಡೆ ಮಾಡದೇ ಕೇವಲ 105 ಕೋಟಿ ಬಿಡುಗಡೆ ಮಾಡಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದೀರಿ. ರಾಜ್ಯದ ರೈತರ ಬಗ್ಗೆ ನಿಮಗೆ ಕಳಕಳಿ ಇದ್ದರೆ, ಕೇಂದ್ರದ ಅನುದಾನದ ನೆಪ ಹೇಳದೇ ಕೂಡಲೇ ಸಂಪೂರ್ಣ ಬೆಳೆ ಪರಿಹಾರ ಬಿಡುಗಡೆ ಮಾಡಿ. ಇಲ್ಲದಿದ್ದರೆ ಸಂಕಷ್ಟಕ್ಕೆ ಬಾರದ ನಿಷ್ಪ್ರಯೋಜಕ ಸರ್ಕಾರ ನಿಮ್ಮದು ಎಂದು ರಾಜ್ಯದ ರೈತರು ಶಾಪ ಹಾಕುವುದು ನಿಶ್ಚಿತ ಎಂದು ಹೇಳಿದ್ದಾರೆ.