ಬೆಂಗಳೂರು ಎಂದಾಕ್ಷಣ ಮೆಲ್ಸೇತುವೆ, ರಸ್ತೆ ಗುಂಡಿ, ಮುಖ್ಯವಾಗಿ ಸಂಚಾರ ದಟ್ಟಣೆಯಿಂದ ಸುದ್ದಿಯಾಗುತ್ತಲೇ ಇರುತ್ತದೆ. ಈ ವರ್ಷ ಮಳೆಗಾಲದಲ್ಲಿ ಹೆಚ್ಚಾಗಿ ಮಳೆಯಾಗದ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಸಮಸ್ಯೆ ಬಹುವಾಗಿ ಕಾಣಿಸಿಕೊಂಡಿಲ್ಲ. ಭೋರ್ಗರೆದು ಮಳೆ ಸುರಿದಿದ್ದರೆ, ಬಿಬಿಎಂಪಿ ಕಳಪೆ ಕಾಮಗಾರಿ, ನಿರ್ವಹಣಾ ಕಾರ್ಯಗಳ ನಿರ್ಲಕ್ಷ್ಯ ಜನರ ಕಣ್ಣಿಗೆ ಬೀಳುತ್ತಿತ್ತು. ಇನ್ನು ಬಿಬಿಎಂಪಿಯಿಂದ ಮೊದಲ ಬಾರಿಗೆ ನಿರ್ಮಾಣ ಮಾಡಿದ ದೊಡ್ಡ ಸೇತುವೆಗಳಲ್ಲಿ ಬಾಲಗಂಗಾಧರನಾಥ ಸ್ವಾಮಿ ಮೇಲ್ಸೇತುವೆಯೂ ಒಂದಾಗಿದೆ. ಆದರೆ, ಇದನ್ನು ನಿರ್ವಹಣೆ ಮಾಡುವಲ್ಲಿ ಮಾತ್ರ ಬಿಬಿಎಂಪಿ ಪ್ರತಿ ವರ್ಷ ನಿರ್ಲಕ್ಷ್ಯ ತೋರುತ್ತಿದೆ.
ಇಲ್ಲಿ ನೋಡಿ ಈ ರಸ್ತೆ ಬೆಂಗಳೂರಿನಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮೇಲ್ಸೇತುವೆ ಬಾಲಗಂಗಾಧರನಾಥ ಸ್ವಾಮಿ ಮೇಲ್ಸೇತುವೆಯ ಜಾಯಿಂಟ್ನಲ್ಲಿನ ನಟ್ ಬೋಲ್ಡ್ ಕಳಚಿ ಕಬ್ಬಿಣದ ಪ್ಲೇಟ್ ಮಾರುದ್ದ ದೂರದಲ್ಲಿ ಬಿದ್ದಿತ್ತು. ಆಗಿಂದಾಗ್ಗೆ ಈ ಫ್ಲೈಓವರ್ನಲ್ಲಿ ದುರಸ್ತಿ ಕಾಣಿಸಿಕೊಳ್ಳುತ್ತಿದ್ದರೂ, ಬಿಬಿಎಂಪಿ ಮಾತ್ರ ಸೂಕ್ತ ನಿರ್ವಹಣಾ ಕಾರ್ಯ ಮಾಡುತ್ತಿಲ್ಲ.ಫ್ಲೈಓವರ್ ಜಾಯಿಂಟ್ನಿಂದ ಕಬ್ಬಿಣದ ಪ್ಲೇಟ್ ಕಳಚಿ ಬಂದಿದ್ದು, ಅಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ನಿಷೇಧಿಸಿದ್ದಾರೆ. ಆದರೆ, ಬಿಬಿಎಂಪಿ ಮಾತ್ರ ಇನ್ನೂ ದುರಸ್ತಿ ಕಾರ್ಯವನ್ನೇ ಕೈಗೊಂಡಿಲ್ಲ.
ನಗರದ ಪುಟ್ಟಣ್ಣಚೆಟ್ಟಿ ಪುರಭವನದಿಂದ ಕೆ.ಆರ್. ಮಾರುಕಟ್ಟೆಯ ವೃತ್ತದ ಬಳಿಯಿರುವ ಟ್ರಾಫಿಕ್ ತಪ್ಪಿಸಿ ಮೈಸೂರು ರಸ್ತೆಯ ಸಿರ್ಸಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಈ ಬಿಜಿಎಸ್ ಮೇಲ್ಸೇತುವೆ ಪ್ರತಿ 1 ರಿಂದ 2 ವರ್ಷಕ್ಕೊಮ್ಮೆ ಸುದ್ದಿಯಾಗುತ್ತಲೇ ಇರುತ್ತದೆ. ಈ ವರ್ಷ ಸಿರ್ಸಿ ವೃತ್ತದ ಬಳಿ ಮೇಲ್ಸೇತುವೆಯ ಒಂದು ಜಾಯಿಂಟ್ನ ಕಬ್ಬಿಣ ಕಿತ್ತುಕೊಂಡು ಬಂದಿದೆ. ಇನ್ನು ಅದರ ನಟ್ಟು-ಬೋಲ್ಟ್ ಕೂಡ ಕಳಚಿಕೊಂಡು ಹೋಗಿವೆ. ಇಲ್ಲಿ ಯಾವುದಾದರೂ ಭಾರಿ ವಾಹನ ಸಂಚಾರ ಮಾಡಿದರೆ, ಮೇಲ್ಸೇತುವೆಗೇ ಹಾನಿಯಾಗುವ ಸಾಧ್ಯತೆಯಿದೆ. ಇದರಿಂದ ಮೇಲ್ಸೇತುವೆ ಮೇಲೆ ಸಂಚಾರ ಮಾಡುವ ಜನರು ಆತಂಕ ಪಡುವಂತಾಗಿದೆ.
ಬಿಬಿಎಂಪಿಯಲ್ಲಿ ಪ್ರತಿವರ್ಷ ಮೇಲ್ಸೇತುವೆಗಳ ನಿರ್ವಹಣೆ ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚಲು ಕೋಟ್ಯಾಂತರ ರೂ. ಅನುದಾನ ಮೀಸಲಿಡಲಾಗುತ್ತದೆ. ಆದರೆ, ಅಧಿಕಾರಿಗಳು ಮಾತ್ರ ಮೇಲ್ಸೇತುವೆ ನಿರ್ವಹಣೆಯನ್ನೇ ಮಾಡುವುದಿಲ್ಲ. ಯಾವುದಾದರೂ ಫ್ಲೈಓವರ್ನಲ್ಲಿ ಸಮಸ್ಯೆ ಕಂಡುಬಂದಾಗ ಮಾತ್ರ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಇನ್ನು ಕಳೆದ ಎರಡು ವರ್ಷಗಳ ಹಿಂದೆಯೂ ಬಿಜಿಎಸ್ ಮೇಲ್ಸೇತುವೆಯಲ್ಲಿ ಸಮಸ್ಯೆ ಕಂಡುಬಂದಾಗ ಮಾತ್ರ ರಿಪೇರಿ ಮಾಡಿ ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿತ್ತು. ಇದಾದ ನಂತರ, ಮೇಲ್ಸೇತುವೆ ಕಡೆಗೆ ಅಧಿಕಾರಿಗಳು ತಿರುಗಿಯೂ ನೋಡುವುದಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಒಟ್ಟಾರೆ ಬಿಬಿಎಂಪಿಯಿಂದ ಕೋಟಿ ಕೋಟಿ ಅನುದಾನಗಳು ಬೆಂಗಳೂರಿನ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ..ಇದರಲ್ಲಿ ಮೇಲ್ ಸೇತುವೆ ಪ್ರಮುಖವಾದದು ..ಬೆಂಗಳೂರಲ್ಲಿರುವಂತಹ ಮೇಲ್ಸೇತುವೆಗಳನ್ನು ಅಧಿಕಾರಿಗಳು ಗಮನಕ್ಕೆ ತೆಗೆದುಕೊಂಡಿಲ್ಲ ಅದರ ನಿರ್ವಹಣೆಗೂ ಕೂಡ ಮಾಡ್ತಿಲ್ಲ.. ಮೇಲೆಸೇತುವೆಗಳ ದುರಸ್ತಿಯನ್ನು ಕಂಡು ಕಾಣದಂತೆ ಸುಮ್ಮನಿದ್ದಾರೆ..ತಮ್ಮ ಜೇಬಿಗೆ ಹಣದ ಖಜಾನೆಯನ್ನು ಸದ್ದಿಲ್ಲದೆ ತುಂಬಿಕೊಳ್ಳುತ್ತಿದ್ದಾರೆ ..ಆದರೆ ಜನರ ಸೇವೆಗೆ ಮಾತ್ರ ಕ್ಯಾರೇ ಅನ್ನಕ್ಕಾಗಿ..ಮುಂದಿನ ದಿನಗಳಲ್ಲಿ ಇದು ಸಾರ್ವಜನಿಕರಿಗೆ ಯಾವ ರೀತಿ ಆಪತ್ತಾಗುತ್ತದೆ,ಇಲ್ಲ ಅಷ್ಟರಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಮಗಾರಿ ಶುರು ಮಾಡುತ್ತಾರಾ ಎಂದು ಕಾದು ನೋಡಬೇಕಾಗಿದೆ ..