ಬೆಳಗಾವಿ: ಪ್ರಮುಖ ದಾಖಲೆಗಳ ಸಂಗ್ರಹವಿದ್ದ ನಾಲ್ಕು ಲ್ಯಾಪ್ಟಾಪ್ ಕಳ್ಳತನ ಮಾಡಿ ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಕಳ್ಳರು ಕೈಚಳಕ ತೋರಿಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಬಸವೇಶ್ವರ ವೃತ್ತದಲ್ಲಿನ ಪಾಲಿಕೆ ದಕ್ಷಿಣ ವಲಯದ ಕಂದಾಯ ಕಚೇರಿಯಲ್ಲಿದ್ದ ಲ್ಯಾಪ್ಟಾಪ್ ಕಳ್ಳತನ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಚೇರಿಯೊಳಗೆ ಕಿಡಕಿ ಗಾಜು ಒಡೆದು ಬಾಗಿಲು ಮುರಿದು ಒಳಗೆ ನುಗ್ಗಿರುವ ಕಳ್ಳರು ಲ್ಯಾಪ್ಟಾಪ್ ಎಗರಿಸಿ ಪರಾರಿಯಾಗಿದ್ದಾರೆ.
ಅಲ್ಲದೇ ಇನ್ನು ಏನೆಲ್ಲ ಕದ್ದಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ. ಆಸ್ತಿ ಮಾಲೀಕತ್ವ ದಾಖಲಾತಿ, ಆಸ್ತಿ ಮಾಲೀಕರ ಗುರುತಿನ ಚೀಟಿ, ತೆರಿಗೆ ಚೀಟಿ, ಕಟ್ಟಡ ಪರವಾನಗಿ ಪತ್ರ, ಹೀಗೆ 26 ವಾರ್ಡ್ಗಳ ನಿವಾಸಿಗಳ ದಾಖಲೆಗಳ ಸಂಗ್ರಹವಿದ್ದ ನಾಲ್ಕು ಲ್ಯಾಪ್ಟಾಪ್ಗಳನ್ನು ಕಳ್ಳರು ಕದ್ದಿದ್ದಾರೆ. ಸಿಬ್ಬಂದಿ ಕಚೇರಿಗೆ ಸೋಮವಾರ ಬೆಳಗ್ಗೆ ಬಂದು ನೋಡಿದಾಗ, ನಿನ್ನೆ ತಡರಾತ್ರಿ ಕಳ್ಳರು ಕಚೇರಿಗೆ ನುಗ್ಗಿ ತಿಜೋರಿಯಲ್ಲಿಟ್ಟಿದ್ದ ನಾಲ್ಕು ಲ್ಯಾಪ್ಟಾಪ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಟಿಳಕವಾಡಿ ಠಾಣೆ ಪೊಲೀಸರು ಹಾಗೂ ಶ್ವಾನದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.