ಮಂಡ್ಯ: ಪ್ರೊಫೆಸರ್ ಒಬ್ಬ ಆಸ್ತಿ ಆಸೆಗಾಗಿ ತನ್ನ ಪತ್ನಿಯನ್ನು (Wife) ಕೊಲೆಗೈದ ಘಟನೆ ಇಲ್ಲಿನ (Mandya) ವಿವಿ ನಗರ ಬಡಾವಣೆಯಲ್ಲಿ ನಡೆದಿದೆ. ಕೊಲೆಗೈದ ಬಳಿಕ ಸಹಜ ಸಾವೆಂದು ನಾಟಕವಾಡಿ ಈಗ ಪೊಲೀಸರ (Police) ಅತಿಥಿಯಾಗಿದ್ದಾನೆ. ಕೊಲೆಯಾದ ಮಹಿಳೆಯನ್ನು ಎಸ್.ಶೃತಿ (32) ಎಂದು ಗುರುತಿಸಲಾಗಿದೆ. ಹತ್ಯೆಗೀಡಾದವಳ ಪತಿ ಟಿ.ಎನ್.ಸೋಮಶೇಖರ್ (41) ಹಣದ ದಾಹಕ್ಕೆ ಬಿದ್ದು, ಮಲಗಿದ್ದ ಪತ್ನಿಯನ್ನು ದಿಂಬು ಹಾಗೂ ಬೆಡ್ ಶೀಟ್ನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ.
ಶೃತಿಯ ತಂದೆ, ತಾಯಿ ಕೆಲವು ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತ ಪಟ್ಟಿದ್ದರು. ಆಕೆಯ ತಂಗಿ 2018ರಲ್ಲಿ ಅಪಘಾತದಲ್ಲಿ ಸಾವಿಗೀಡಾಗಿದ್ದಳು. ಇದಾದ ಬಳಿಕ ಆಕೆಯ ಹೆಸರಿಗೆ 10 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಆಸ್ತಿ ಸೇರಿತ್ತು. ಮೈಸೂರಿನ ಪ್ರಮುಖ ನಗರಗಳಲ್ಲಿದ್ದ ಕಮರ್ಷಿಯಲ್ ಕಟ್ಟಡಗಳು, ಮನೆ ಹಾಗೂ ಸೈಟ್ಗಳು ಶೃತಿಯ ಹೆಸರಲ್ಲಿತ್ತು. ಆ ಆಸ್ತಿಯನ್ನು ಮಾರಿ ಬೇರೆಡೆ ಆಸ್ತಿ ಕೊಳ್ಳಲು ಶೃತಿಗೆ ಆರೋಪಿ ಪತಿ ಒತ್ತಾಯಿಸುತ್ತಿದ್ದ. ಪತಿಯ ಆಸ್ತಿ ಮಾರಾಟ ವಿಚಾರಕ್ಕೆ ಪತ್ನಿ ನಿರಾಕರಿಸಿದ್ದಾಳೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಹಲವು ಬಾರಿ ಜಗಳ ಕೂಡ ಆಗಿತ್ತು.
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಇದೇ ಕಾರಣಕ್ಕೆ ಕಳೆದ ಶನಿವಾರ ಆಕೆ ಮಲಗಿದ್ದ ವೇಳೆ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ಕೊಲೆಯಾದ ಬಳಿಕ ಪಲ್ಸ್ ರೇಟ್ ಕಮ್ಮಿಯಾಗಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾಳೆಂದು ನಾಟಕವಾಡಿದ್ದ. ಸೋಮಶೇಖರ್ ಭಾವ ಮೃತ ಶೃತಿ ಚಿಕ್ಕಪ್ಪನಿಗೆ ಕರೆ ಮಾಡಿ ಸಹಜ ಸಾವೆಂದು ತಿಳಿಸಿದ್ದ. ಅನುಮಾನಗೊಂಡ ಶೃತಿಯ ಚಿಕ್ಕಪ್ಪ ಕುಮಾರಸ್ವಾಮಿ ಎಂಬವರು ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆಗೈದಿದ್ದು ಬೆಳಕಿಗೆ ಬಂದಿತ್ತು. ವಿಚಾರಣೆ ವೇಳೆ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.