ವಾಶಿಂಗ್ಟನ್: ಮಹತ್ವದ ಖನಿಜ ಒಪ್ಪಂದಕ್ಕೆ ಸಹಿ ಮಾಡಲು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿಯನ್ನು ವಾಶಿಂಗ್ಟನ್ ಗೆ ಆಹ್ವಾನಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಾರಗಳೊಳಗೆ ಉಕ್ರೇನ್ ಹಾಗೂ ರಶ್ಯ ನಡುವಿನ ಯುದ್ಧ ಅಂತ್ಯಗೊಳ್ಳಲಿದೆ ಎಂದಿದ್ದಾರೆ.
ಯೂರೋಪ್ ನಲ್ಲಿ ಶಾಂತಿಪಾಲನಾ ಪಡೆಗಳನ್ನು ನಿಯೋಜಿಸುವ ಕುರಿತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಯಾವುದೇ ತರಕಾರಿಲ್ಲ ಎಂದೂ ಹೇಳಿರುವ ಅವರು, ರಶ್ಯಕ್ಕೆ ಇನ್ನೂ ಹೆಚ್ಚಿನ ಯುದ್ಧಗಳು ಬೇಕಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಟ್ರಂಪ್, “ನಾನು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ಭೇಟಿಯಾಗಲಿದ್ದೇನೆ. ಅವರು ಈ ವಾರ ಆಥವಾ ಮುಂದಿನ ವಾರ ಒಪ್ಪಂದಕ್ಕೆ ಸಹಿ ಮಾಡಲು ಅಮೆರಿಕಕ್ಕೆ ಬರಲಿದ್ದಾರೆ” ಎಂದು ತಿಳಿಸಿದ್ದಾರೆ.
ಉಕ್ರೇನ್ ನಲ್ಲಿನ ಯುದ್ಧವನ್ನು ಅಂತ್ಯಗೊಳಿಸುವ ಮಾತುಕತೆಯಲ್ಲಿ ಝೆಲೆನ್ಸ್ಕಿ ಭಾಗಿಯಾಗಬೇಕಾದ ಅಗತ್ಯವಿಲ್ಲ ಎಂದು ಟ್ರಂಪ್ ಹೇಳಿದ ಕೆಲ ದಿನಗಳ ನಂತರ, ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ ನಡುವೆ ಸಭೆ ನಡೆದಿತ್ತು. ಇದಾದ ನಂತರ, ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಕಳೆದ ವಾರ ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿಯನ್ನು ಸರ್ವಾಧಿಕಾರಿ ಎಂದು ಟ್ರಂಪ್ ಟೀಕಿಸಿದ ನಂತರ, ಸೌದಿ ಅರೇಬಿಯಾದಲ್ಲಿ ನಡೆದಿದ್ದ ಅಮೆರಿಕ-ರಶ್ಯ ಸಭೆಯಿಂದ ಉಕ್ರೇನ್ ಅನ್ನು ಹೊರಗಿಡಲಾಗಿತ್ತು. ಅದರ ಬೆನ್ನಿಗೇ, ಈ ಬೆಳವಣಿಗೆ ನಡೆದಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.