ಇಂದು ಕನ್ನಡಚಿತ್ರರಂಗದ ಹಿರಿಯ ಕೊಂಡಿ ಕಳಚಿಹೋಗಿದೆ. ಕರುನಾಡ ಕುಳ್ಳ ಪ್ರಚಂಡ ಕುಳ್ಳ,ನಟ ನಿರ್ಮಾಪಕ ಹಾಸ್ಯ ದಿಗ್ಗಜ ದ್ವಾರಕೀಶ್ ಇಂದು ವಿಧಿವಶರಾಗಿದ್ದಾರೆ. ಹಿರಿಯ ನಟ ದ್ವಾರಕೀಶ್ ಸಾವಿಗೆ ಇಢೀ ಚಿತ್ರರಂಗ ಕಂಬನಿ ಮಿಡಿದಿದೆ……
ಕರ್ನಾಟಕದ ಕುಳ್ಳ ದ್ವಾರಕೀಶ್ ನಿಧನ: ತೀವ್ರ ನೋವಾಗಿದೆ ಎಂದು ಕಂಬನಿ ಮಿಡಿದ ರಜನಿಕಾಂತ್!
ದ್ವಾರಕೀಶ್ ಯುಗಾಂತ್ಯವಾಗಿದೆ. ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ನಿರ್ದೇಶಕ ನಿರ್ಮಾಪಕ, ಕರ್ನಾಟಕದ ಕುಳ್ಳ ಕಣ್ಮರೆಯಾಗಿದ್ದಾರೆ. ಕಾಕತಾಳೀಯ ಏನೋ ತನ್ನಿಷ್ಟದ ಹಾಸ್ಯ ಚಕ್ರವರ್ತಿ ಚಾರ್ಲಿ ಚಾಂಪಿಯನ್ 135ನೇ ಜನ್ಮೋತ್ಸವದಂದೇ ದ್ವಾರಕೀಶ್ ಕೊನೆಯುಸಿರೆಳೆದಿದ್ದಾರೆ. ಅಷ್ಟೇ ಅಲ್ಲ, ಪತ್ನಿ ಅಂಬುಜ ಸಾವಿನ ದಿನದಂದೇ ಪ್ರಪಂಡ ಕುಳ್ಳ ಉಸಿರುನಿಲ್ಲಿಸಿದ್ದಾರೆ.
ಜೀವನದುದ್ದಕ್ಕೂ ಚಿತ್ರ ಸೇವೆಗೆ ಜೀವನವನ್ನೇ ಮುಡಿಪಿಟ್ಟಿದ್ದ ದ್ವಾರಕೀಶ್, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಕೆಲದಿನಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದರು. ಸೋಮವಾರ ದ್ವಾರಕೀಶ್ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಸಣ್ಣ ಪ್ರಮಾಣದಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ರಾತ್ರಿಯಿಡಿ ನಿದ್ದೆ ಮಾಡಿರಲಿಲ್ಲ. ಬೆಳಗ್ಗೆ ಕಾಫಿ ಕುಡಿದು ಸ್ವಲ್ಪ ಹೊತ್ತು ನಿದ್ದೆ ಮಾಡುತ್ತೇನೆ ಎಂದು ಮಲಗಿದ್ದಾರೆ. ಈ ವೇಳೆ ಹಾರ್ಟ್ ಅಟ್ಯಾಕ್ ಹಾಕಿ ದ್ವಾರಕೀಶ್ ನಿಧನರಾಗಿದ್ದಾರೆ.
ಸಿನಿಮಾವನ್ನೇ ಉಸಿರಾಗಿಸಿಕೊಂಡು ಸಿನಿಮಾಗಾಗಿ ಜೀವಿಸ್ತಿದ್ದ ದ್ವಾರಕೀಶ್ ಐದು ವರ್ಷ ಕಾಲ ಸೇವೆ ಜೀವನವನ್ನು ಮುಡಿಪಾಗಿಟ್ಟಿದ್ದರು. 1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದ್ದು, ಬಂಗ್ಲೆ ಶಾಮರಾವ್ ದ್ವಾರಕಾನಾಥ್ ದ್ವಾರಕೀಶ್ ಎಂಬ ಹೆಸ್ರಿನ ಮೂಲಕ ಸಿನಿರಂಗಕ್ಕೆ ಅಡಿ ಇಟ್ಟರು. ಕನ್ನಡದ ಅದ್ವಿತೀಯ ನಿರ್ದೇಶಕ ದಿವಂಗತ ಹುಣಸೂರು ಕೃಷ್ಣಮೂರ್ತಿ ಅವರ ತಂಗಿಯ ಮಗನಾಗಿದ್ದ ದ್ವಾರಕೀಶ್ ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದು ಚಿತ್ರರಂಗಕ್ಕೆ ಪ್ರವೇಶ ಪಡೆದ್ರು.
ಹಾಸ್ಯಕ್ಕೆ ಆಪ್ತಮಿತ್ರನಂತಿದ್ದವರು, ನಟನೆಯಲ್ಲಿ ಮೋಡಿ ಮಾಡಿದವರು, ನಿರ್ದೇಶನದಲ್ಲಿ ಗೆದ್ದವರು ದ್ವಾರಕೀಶ್. ಅದೆಲ್ಲದಕ್ಕಿಂತ ಹೆಚ್ಚಾಗಿ ಪ್ರಚಂಡ ಕುಳ್ಳ ನಿರ್ಮಾಣದಲ್ಲಿ ಕೆಚ್ಚೆದೆಯ ವೀರ. ಕೇವಲ 24 ವಯಸ್ಸಿಗೆ ಸಿನಿಮಾ ನಿರ್ಮಾಣಕ್ಕಿಳಿದು ಗೆದ್ದವರು ದ್ವಾರಕೀಶ್. 24ರ ಪ್ರಾಯದಲ್ಲಿ ನಿರ್ಮಾಪಕ ಸ್ಥಾನವನ್ನು ಅಲಂಕರಿಸಿ ಮಮತೆಯ ಬಂಧ ಎಂಬ ಸಿನಿಮಾ ಮಾಡಿದ್ರು. ಬಳಿಕ ಡಾ,ರಾಜ್ ಗೆ ಮೇಯರ್ ಮುತ್ತಣ್ಣ ಸಿನಿಮಾ ಮಾಡಿ ಗೆದ್ದವರು. ರಾಜ್, ವಿಷ್ಣು, ಶಂಕರ್ ನಾಗ್ ಅತ್ಯಾಪ್ತರಾಗಿದ್ದ ದ್ವಾರರ್ಕಿಶ್ ಕನ್ನಡ ಪ್ರೇಕ್ಷಕರ ಬೆರಗು ಕಣ್ಣಿನಿಂದ ನೋಡುವಂತಹ ಹಲವು ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ದ್ವಾರಕೀಶ್ ಹಲವು ಪ್ರಥಮಗಳಿಗೆ ನಾಂದಿ ಹಾಡಿದ್ರು. 50ಕ್ಕೂ ಹೆಚ್ಚು ಚಿತ್ರ ನಿರ್ಮಿಸಿರುವ ಪ್ರಚಂಡ ಕುಳ್ಳ ಮಾಡಿದ್ದು ಒಂದೆರೆಡು ಸಾಹಸವಲ್ಲ. ವಿದೇಶದಲ್ಲಿ ಮೊದ್ಲು ಸಿನಿಮಾ ನಿರ್ಮಿಸಿದ ನಿರ್ಮಾಪಕ ದ್ವಾರಕೀಶ್. ಸಿಂಗಾಪುರದಲ್ಲಿ ಕುಳ್ಳ, ಆಫ್ರಿಕಾದಲ್ಲಿ ಶೀಲಾ ಚಿತ್ರಗಳನ್ನು ವಿದೇಶದಲ್ಲಿ ನಿರ್ಮಿಸಿ ಸೈ ಎನಿಸಿಕೊಂಡ ಕರುನಾಡ ಕುಳ್ಳ, ವಿನೋದ್ ರಾಜ್, ಶೃತಿ ಸೇರಿದಂತೆ ಹಲವು ತಾರೆಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.
ಹಾಸ್ಯಕ್ಕೆ ಹೊಸ ಭಾಷ್ಯ ಬರೆದ ದ್ವಾರಕೀಶ್ ನಿಧನದೊಂದಿಗೆ ಕನ್ನಡ ಚಿತ್ರರಂಗದ ದೊಡ್ಡ ಅಧ್ಯಾಯವೊಂದು ಅಂತ್ಯ ಕಂಡಿದೆ. ಐದು ದಶಕಗಳ ಕಾಲ ಸಿನಿಮಾರಂಗಕ್ಕೆ ದುಡಿದ ವಿಷ್ಣು ಆಪ್ತ ಎಲ್ಲರನ್ನು ಅಗಲಿದ್ದಾರೆ. ದ್ವಾರಕೀಶ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಚಿತ್ರರಂಗದ ಕಲಾವಿದರು ಹಾಗೂ ರಾಜಕೀಯ ದಿಗ್ಗಜರು ಪ್ರಚಂಡ ಕುಳ್ಳನ ಸಾಹಸವನ್ನು ಸ್ಮರಿಸಿದ್ದಾರೆ.
ಬುಧವಾರದ ಕನ್ನಡ ಚಿತ್ರರಂಗ ಸ್ವಯಃ ಪ್ರೇರಿತ ಬಂದ್ ಮಾಡುವ ಮೂಲಕ ದ್ವಾರಕೀಶ್ ನಿಧನಕ್ಕೆ ಸಂತಾಪ ಸೂಚಿಸಿದೆ. ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಕರುನಾಡ ಕುಳ್ಳನ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ದರ್ಶನದ ಬಳಿಕ ಬೆಂಗಳೂರಿನ ಚಾಮರಾಜನಗರ ಟಿಆರ್ ಮಿಲ್ ಪಕ್ಕದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.