ಬೆಳಗಾವಿ : ಕನ್ನಡ ಮಾತಾಡು ಎಂದಿದ್ದಕ್ಕೆ ಕೆಎಸ್ಆರ್ಟಿಸಿ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ತನಿಖೆ ನಡೆಯುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಇಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಹಲ್ಲೆಗೊಳಗಾದ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಆರೋಗ್ಯ ವಿಚಾರಿಸಿದರು, ಬಳಿಕ ಘಟನೆ ಕುರಿತು ಕಂಡಕ್ಟರ್ ಕಡೆಯಿಂದ ಮಾಹಿತಿ ಪಡೆದರು. ಈ ವೇಳೆ ಕಂಡಕ್ಟರ್ ಮಹಾದೇವಪ್ಪ ಸಚಿವರ ಮುಂದೆ ಘಟನೆ ನೆನೆದು ಕಣ್ಣೀರಿಟ್ಟರು.
ಬಳಿಕ ಮಾತನಾಡಿದ ಅವರು, ಕಂಡಕ್ಟರ್ ಆರೋಗ್ಯ ಸ್ಥಿರವಾಗಿದೆ ಎರಡು ದಿನದಲ್ಲಿ ಮನೆಗೆ ಕಳುಹಿಸುತ್ತಾರೆ. ನಮ್ಮ ಎಂಡಿಯವರು ಪ್ರತಿದಿನ ಬಂದು ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಗಲಾಟೆಯಾದ ಮೇಲೆ ಕೇಸ್ ಕೊಟ್ಟಿದ್ದಕ್ಕೆ ಗಾಬರಿಯಾಗಿದ್ದಾರೆ. ಏನೇ ಕೇಸ್ ಮಾಡಲಿ ತನಿಖೆ ಮಾಡುತ್ತಾರೆ ಎಂದ ರೆಡ್ಡಿ. ಆ ಬಸ್ ನಲ್ಲಿ ಅಂದು 90 ಜನ ಇದ್ರೂ. 1 ಲಕ್ಷ 72 ಸಾವಿರ ಕರ್ನಾಟಕದಲ್ಲಿ ಟ್ರಿಪ್ಸ್ ಇರುತ್ತೆ. ಈ ರೀತಿ ದೂರು 65 ವರ್ಷದಲ್ಲಿ ಕೇಸ್ ಆಗಿಲ್ಲ. ಉದ್ದೇಶಪೂರ್ವಕವಾಗಿ ಕೇಸ್ ಕೊಟ್ಟಿದ್ದಾರೆ. ನಾನು ಕೇಸ್ ಬಗ್ಗೆ ಗೃಹಮಂತ್ರಿ ಜೊತೆ ಮಾತನಾಡುತ್ತೇನೆ. ಮಹಾದೇವಪ್ಪ ಪರವಾಗಿ ನಮ್ಮ ಇಲಾಖೆ, ಸಾರ್ವಜನಿಕರು ಎಲ್ಲರೂ ಇದಾರೆ.
ಇನ್ನೂ ಬಸ್ ಗಳಿಗೆ ಮಸಿ ಬಳಿದ ವಿಚಾರವಾಗಿ ಪ್ರತಿಕ್ರಿಯಿಸಿ ಎರಡು ರಾಜ್ಯಕ್ಕೆ ಇದರಿಂದ ನಷ್ಟ ಆಗುತ್ತೆ. ಸಾರ್ವಜನಿಕರಿಗೆ ತೊಂದರೆ ಇಲಾಖೆಗೂ ನಷ್ಟ ಆಗುತ್ತೆ. ಶಿವಸೇನೆ ಅಂತಾ ಒಂದು ಪಕ್ಷ. ಈ ತರದ ವ್ಯಕ್ತಿಗಳಿಗೆ ಸಪೋರ್ಟ್ ಮಾಡಬಾರದು. ಇದೊಂದು ಸಣ್ಣ ಕಾರಣಕ್ಕೆ ಘಟನೆ ಆಗಿದೆ. ಶಿವಸೇನೆ ಅಂತವರು ಸೀರಿಯಸ್ ತಗೋಬಾರದಿತ್ತು. ಅಂತವರ ಮೇಲೆ ಮಹಾರಾಷ್ಟ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಬೆಳಗಾವಿಯಲ್ಲಿ ಎಂಇಎಸ್ ನವರು ಗೂಂಡಾಗಿರಿ ಮಾಡುವವರಿಗೆ ಬೆಂಬಲ ಕೊಟ್ರೇ ನಾವು ಕೇಸ್ ಹಾಕುತ್ತೇವೆ. ನಮ್ಮ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದವರ ಮೇಲೆ ಗೂಂಡಾ ಕಾಯ್ದೆ ಹಾಕಬೇಕು ಎಂದರು.