ರಾಮನಗರ: ಇದೊಂದು ಸುದಿನ. ಟೊಯೋಟಾ 25 ವರ್ಷ ಪೂರೈಸಿದೆ. ಹೆಣ್ಣು ಮಕ್ಕಳಿಗೆ ಶಕ್ತಿ ತುಂಬಲು ತರಬೇತಿ ಯೋಜನೆ ರೂಪಿಸಿರೋದು ಶ್ಲಾಘನೀಯ. ಭಾರತದ ಅದರಲ್ಲೂ ಕರ್ನಾಟಕದ ಹೆಮ್ಮೆಯ ಸಂಸ್ಥೆ. ಗುಣಮಟ್ಟದಲ್ಲಿ ಯಾವತ್ತೂ ರಾಜಿ ಮಾಡಿಕೊಂಡಿಲ್ಲ ಎಂದು ಸಂಸದ ಡಿ ಕೆ ಸುರೇಶ್ ಹೇಳಿದರು. ಟೊಯೋಟಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯಲ್ಲಿ ಹೆಮ್ಮೆಯಿಂದ ತಲೆ ಎತ್ತಿ ನಿಂತಿದೆ. ಇವತ್ತಿನ ಸವಾಲು ಉದ್ಯೋಗ ಸೃಷ್ಟಿ. ಸಂಸ್ಥೆ ಅದನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ.
ಯುವಕ, ಯುವತಿಯರಿಗೆ ಬದುಕು ಕಟ್ಟಿ ಕೊಡುತ್ತಿದೆ. ಹೆಣ್ಣು ಮಕ್ಕಳಿಗೆ ವಿಶೇಷ ತರಬೇತಿಗೆ ಮುಂದಾಗಿರೋದು ಮಾದರಿ. ಶಿಕ್ಷಣ, ಗಾರ್ಮೆಂಟ್ ಉದ್ಯಮದಲ್ಲಿ ಸಾಧನೆ ಮಾಡಿರುವ ಮಹಿಳೆಯರ ಕೈಗೆ ಸ್ಕ್ರೂ ಡ್ರೈವರ್, ಸ್ಪಾನರ್ ಕೊಟ್ಟು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೆ ಪ್ರೇರಣೆ ನೀಡಿರುವುದು ಅನುಕರಣನೀಯ. ವಿಶ್ವದಲ್ಲಿ ಮಹಿಳಾ ಶಕ್ತಿ ಪ್ರಾಮುಖ್ಯತೆ ಪಡೆದಿದೆ. ಮಹಿಳೆಯರು ಸ್ವಾವಲಂಬನೆ ಸಾಧಿಸುತ್ತಿರೋದು ಶ್ಲಾಘನೀಯ. ಡಿಸಿಎಂ ಮೂಲಕ ಸಿಎಂ ಅವರಿಗೆ ವಿಶೇಷ ಮನವಿ ಮಾಡುತ್ತೇನೆ. ಉದ್ಯೋಗದಲ್ಲಿ ಮಹಿಳೆಯರಿಗೆ ಶೇಕಡಾ 25 ರಷ್ಟು ಮೀಸಲಿಡಲು ಕೋರುತ್ತೇನೆ.
ಟೊಯೋಟಾದಲ್ಲಿ ರಾಮನಗರ ಜಿಲ್ಲೆಯವರಿಗೆ ಕೆಲಸ ಕೊಡ್ತಿಲ್ಲ ಅನ್ನುವ ಅಪಾದನೆ ಇದೆ. ಕಾರಣ ಗೊತ್ತಿಲ್ಲ. ಹಿಂದಿನ ಘಟನೆಗಳೆನಾದರೂ ಇದ್ದರೆ, ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ನೋಡಬೇಡಿ. ಉದ್ಯೋಗ ನೀಡುವಾಗ ರಾಮನಗರ ಜಿಲ್ಲೆಯವರನ್ನೂ ಪರಿಗಣಿಸಿ. ಸರಕಾರಿ ಶಾಲೆಗಳ ಉನ್ನತೀಕರಣ ಹಾಗೂ ಪಬ್ಲಿಕ್ ಮಾದರಿ ಶಾಲೆಗಳ ನಿರ್ಮಾಣಕ್ಕೆ ಟೊಯೋಟಾ ಸಂಸ್ಥೆ ಸುಮಾರು 30 ಕೋಟಿ ಸಿಎಸ್ಸಾರ್ ನೆರವು ನೀಡಲು ಮುಂದಾಗಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.