ಕೊಪ್ಪಳ:- ಅಧಿಕಾರಿಗಳ ಬೇಜವಾಬ್ದಾರಿ ಹಿನ್ನೆಲೆ, ವಿಕಲಚೇತನರ ತ್ರಿಚಕ್ರ ವಾಹನಗಳು ನಿಂತಲ್ಲೇ ನಿಂತು ಹಾಳಾಗುತ್ತಿವೆ.
ಪ್ರತಿ ವರ್ಷ ತ್ರಿಚಕ್ರ ಸ್ಕೂಟರ್ಗಳನ್ನು ವಿಕಲಾಂಗಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿತರಣೆ ಮಾಡುತ್ತದೆ. 2023-24 ನೇ ಸಾಲಿನಲ್ಲಿ ಕೂಡ ರಾಜ್ಯದಲ್ಲಿರುವ ಸಾವಿರಾರು ವಿಕಲಾಂಗ ಚೇತನರಿಗೆ ತ್ರಿಚಕ್ರ ಸ್ಕೂಟಿಗಳನ್ನು ವಿತರಣೆ ಮಾಡಲು ಇಲಾಖೆ ಮುಂದಾಗಿತ್ತು. ಅದಕ್ಕಾಗಿ ಕಳೆದ ವರ್ಷವೇ ಫಲಾನುಭವಿಗಳ ಅರ್ಜಿ ಕರೆದು, ಜೊತೆಗೆ ಫಲಾನುಭವಿಗಳ ಪಟ್ಟಿಯನ್ನು ಕೂಡಾ ಸಿದ್ದ ಮಾಡಿಕೊಳ್ಳಲಾಗಿತ್ತು. ಆದ್ರೆ, 2024 ಮುಗಿಯುವುದಕ್ಕೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಇನ್ನುವರೆಗೂ ಫಲಾನುಭವಿಗಳ ಕೈಗೆ ಮೂರು ಚಕ್ರದ ಸ್ಕೂಟಿ ಸಿಕ್ಕಿಲ್ಲ.
ಕೊಪ್ಪಳ ನಗರದ ಸುರಭಿ ವೃದ್ದಾಶ್ರಮದಲ್ಲಿ, ಜಿಲ್ಲೆಯ ಫಲಾನುಭವಿಗಳಿಗೆ ನೀಡಬೇಕಾಗಿದ್ದ ನೂರಾ ಇಪ್ಪತ್ತೈದಕ್ಕೂ ಹೆಚ್ಚು ತ್ರಿಚಕ್ರ ವಾಹನಗಳನ್ನು ನಿಲ್ಲಿಸಲಾಗಿದೆ. ಅಚ್ಚರಿಯಂದರೆ, ಕಳೆದ ಆರು ತಿಂಗಳ ಹಿಂದೆಯೇ ಇಲ್ಲಿ ತ್ರಿಚಕ್ರ ಸ್ಕೂಟಿಗಳನ್ನು ತಂದು ನಿಲ್ಲಿಸಲಾಗಿದೆ. ಆದ್ರೆ, ಇಲ್ಲಿವರೆಗೆ ಫಲಾನುಭವಿಗಳಿಗೆ ವಿತರಣೆ ಮಾಡಿಲ್ಲ.
ಕಳೆದ ಮಾರ್ಚ್ ತಿಂಗಳಲ್ಲಿಯೇ ಫಲಾನುಭವಿಗಳಿಗೆ ಈ ಮೂರು ಚಕ್ರದ ಸ್ಕೂಟಿಗಳನ್ನು ವಿತರಣೆ ಮಾಡಬೇಕಿತ್ತು. ಆದ್ರೆ, ಲೋಕಸಭಾ ಚುನಾವಣೆ ನೀತಿ ಸಂಹಿತೆ ಬಂದಿದ್ದರಿಂದ ಅವುಗಳ ವಿತರಣೆ ಮಾಡಿರಲಿಲ್ಲ. ಆದ್ರೆ, ಇದೀಗ ನೀತಿ ಸಂಹಿತೆ ಮುಗಿದು ಅನೇಕ ತಿಂಗಳಾದರೂ ಕೂಡ ಫಲಾನುಭವಿಗಳಿಗೆ ವಿತರಿಸಿಲ್ಲ. ಈ ಬಗ್ಗೆ ಇಲಾಖೆಯ ಉಪ ನಿರ್ದೇಶಕರನ್ನ ಕೇಳಿದ್ರೆ, ‘ಮೂರು ಚಕ್ರದ ಸ್ಕೂಟಿಗಳನ್ನು ಪೂರೈಕೆ ಮಾಡಲು ಟೆಂಡರ್ ಪೆಡದಿದ್ದ ಸಂಸ್ಥೆ, ಆರ್ಸಿ ಕಾರ್ಡ್ಗಳನ್ನು ಕಳುಹಿಸಲು ವಿಳಂಭ ಮಾಡಿತ್ತು. ಆರ್ ಸಿ ಕಾರ್ಡ್ ಇಲ್ಲದೇ ಸ್ಕೂಟಿಗಳನ್ನು ವಿತರಣೆ ಮಾಡೋದು ಸರಿಯಲ್ಲ ಎನ್ನುವ ಉದ್ದೇಶದಿಂದ ಮಾಡಿರಲಿಲ್ಲ. ಇದೀಗ ಆರ್ ಸಿ ಕಾರ್ಡ್ಗಳು ಬಂದಿದ್ದು, ಹಂತಹಂತವಾಗಿ ತಾಲೂಕುವಾರು ಫಲಾನುಭವಿಗಳನ್ನು ಕರೆಸಿ, ವಿತರಣೆ ಮಾಡುತ್ತಿದ್ದೇವೆ ಅಂತಿದ್ದಾರೆ.
ಸೂಕ್ತ ಸಮಯದಲ್ಲಿ ಫಲಾನುಭವಿಗಳಿಗೆ ಸ್ಕೂಟಿಗಳನ್ನು ವಿತರಣೆ ಮಾಡಿದ್ದರೆ, ಫಲಾನುಭವಿಗಳಿಗೆ ಕೂಡ ಅನುಕೂಲವಾಗುತ್ತದೆ. ಸ್ಕೂಟಿಗಳು ಕೂಡ ಸರಿಯಾಗಿರುತ್ತವೆ. ಆದ್ರೆ, ಅವು ಹಾಳಾದ ಮೇಲೆ ವಿತರಣೆ ಮಾಡಿದರೆ ಅದರಿಂದ ಯಾರಿಗೂ ಪ್ರಯೋಜನವಿಲ್ಲದಂತಾಗುತ್ತದೆ.