ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜಾಮೀನು ಸಿಕ್ಕಿದೆ. ದರ್ಶನ್ ಹೊರ ಬಂದಿರುವ ಬಗ್ಗೆ ಹಲವು ಸೆಲೆಬ್ರಿಟಿಗಳು ಖುಷಿ ಹಂಚಿಕೊಂಡಿದ್ದಾರೆ. ಆದರೆ ಈ ಬಗ್ಗೆ ನಟ ಪ್ರಕಾಶ್ ರಾಜ್ ಮಾತನಾಡಲು ನಿರಾಕರಿಸಿದ್ದು ವ್ಯಂಗ್ಯವಾಗಿ ಉತ್ತರಿಸಿದ್ದಾರೆ.
ಮೈಸೂರಿನಲ್ಲಿ ನಟ ಪ್ರಕಾಶ್ ರೈ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಅವರು ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ದರ್ಶನ್ಗೆ ಜಾಮೀನು ಸಿಕ್ಕಿತು. ಸುದ್ದಿಗೋಷ್ಠಿಯಲ್ಲಿದ್ದ ಪ್ರಕಾಶ್ ರಾಜ್ ಅವರಿಗೆ ದರ್ಶನ್ ಬಿಡುಗಡೆಯ ಬಗ್ಗೆ ಕೇಳಲಾಯಿತು. ಈ ವೇಳೆ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ.
ಪ್ರಕಾಶ್ ರಾಜ್ ಅವರು ಶ್ರೀರಂಗಪಟ್ಟಣದಲ್ಲಿ ‘ನಿರ್ದಿಗಂತ’ ರಂಗಶಾಲೆಯನ್ನು ನಡೆಸುತ್ತಿದ್ದಾರೆ. ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಕ್ಕಳ ಕುರಿತಾಗಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ದರ್ಶನ್ ಬಗ್ಗೆ ಪ್ರಶ್ನೆ ಕೇಳಿದ್ದರಿಂದ ಪ್ರಕಾಶ್ ರಾಜ್ ವ್ಯಂಗ್ಯ ಮಾಡಿದರು. ‘ನಾನು ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ. ಕಳ್ಳ ನನ್ನ ಮಕ್ಕಳ ಬಗ್ಗೆ ಅಲ್ಲ. ಹಾಗಾಗಿ ಮಕ್ಕಳ ಬಗ್ಗೆ ಮಾತ್ರ ಮಾತನಾಡೋಣ’ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದ. ಆ ಕಾರಣಕ್ಕಾಗಿ ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಹಲ್ಲೆ ಮಾಡಿ ಸಾಯಿಸಿದ ಆರೋಪ ದರ್ಶನ್, ಪವಿತ್ರಾ ಗೌಡ ಹಾಗೂ ಅವರ ಗ್ಯಾಂಗ್ ಮೇಲಿದೆ. ಈ ಪ್ರಕರಣದಲ್ಲಿ ಎಲ್ಲ ಪ್ರಮುಖ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.