ದಮಾಸ್ಕಸ್ : ದೇಶದ ಸಂಸತ್ತು ಮತ್ತು ಸಂವಿಧಾನವನ್ನು ಮೂರು ತಿಂಗಳು ಅಮಾನತುಗೊಳಿಸುವುದಾಗಿ ಸಿರಿಯಾದ ನೂತನ ಸರಕಾರದ ವಕ್ತಾರರು ತಿಳಿಸಿದ್ದಾರೆ.
ಸಂವಿಧಾನವನ್ನು ಪರಿಶೀಲಿಸಲು ಮತ್ತು ತಿದ್ದುಪಡಿಯನ್ನು ಪರಿಚಯಿಸಲು ನ್ಯಾಯಾಂಗ ಮತ್ತು ಮಾನವ ಹಕ್ಕುಗಳ ಸಮಿತಿಯನ್ನು ಸ್ಥಾಪಿಸಲಾಗುವುದು. ಈಗಿನ ಸಂವಿಧಾನವನ್ನು 2012ರಲ್ಲಿ ರಚಿಸಲಾಗಿದ್ದು ಇಸ್ಲಾಂ ಧರ್ಮವನ್ನು ರಾಷ್ಟ್ರೀಯ ಧರ್ಮವೆಂದು ಸ್ಪಷ್ಟಪಡಿಸಿಲ್ಲ ಎಂದು ಸರಕಾರದ ವಕ್ತಾರ ಒಬೈದ ಅರ್ನೌಟ್ ಹೇಳಿದ್ದಾರೆ.
ಅಧಿಕಾರ ವರ್ಗಾವಣೆಯ ನಿಟ್ಟಿನಲ್ಲಿ ಮುಂದಿನ ವಾರ ಮಧ್ಯಂತರ ಸರಕಾರದ ಸಚಿವರು ಹಾಗೂ ಮಾಜಿ ಸಚಿವರ ನಡುವೆ ಸಭೆ ನಡೆಯಲಿದೆ. ಅಧಿಕಾರ ಬದಲಾವಣೆ ಪ್ರಕ್ರಿಯೆ ಮೂರು ತಿಂಗಳಲ್ಲಿ ಮುಗಿಯಲಿದೆ. ಸರಕಾರದ ಸಂಸ್ಥೆಗಳನ್ನು ಸಂರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಲಿದೆ ಎಂದು ಅರ್ನೌಟ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ದೇಶದಲ್ಲಿ ಕಾನೂನು ಸುವ್ಯವಸ್ಥೆ ಮರುಸ್ಥಾಪಿಸಲಾಗುವುದು. ಸಿರಿಯಾದ ಜನತೆಯ ವಿರುದ್ಧ ಅಪರಾಧ ಕೃತ್ಯ ಎಸಗಿದವರನ್ನು ಕಾನೂನಿನಡಿ ವಿಚಾರಣೆಗೊಳಪಡಿಸಿ ಶಿಕ್ಷಿಸಲಾಗುತ್ತದೆ. ಸಿರಿಯಾದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಗೌರವಿಸುತ್ತೇವೆ. ಇದು ಬದಲಾಗುವುದಿಲ್ಲ ಎಂದು ಅರ್ನೌಟ್ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖವಾಗಿದೆ.