ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ಯೋಜನೆ ಆದ
ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಯಾವುದೇ ಅಭ್ಯಂತರವಿಲ್ಲವೆಂದು ರಾಜ್ಯ ವನ್ಯಜೀವಿ ಮಂಡಳಿ, ಕೇಂದ್ರ ವನ್ಯಜೀವಿ ಮಂಡಳಿಗೆ ಶಿಫಾರಸ್ಸು ಮಾಡಿತ್ತು. ಆದರೆ, ಗೋವಾ ಸರ್ಕಾರದ ಆಕ್ಷೇಪಣೆಯ ಹಿನ್ನೆಲೆಯಲ್ಲಿ ಕೇಂದ್ರ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯು ಈ ಯೋಜನೆಗೆ ಮಂಜೂರು ನೀಡುವ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳದೆ ಮುಂದೂಡುವ ನಿರ್ಧಾರ ತೆಗೆದುಕೊಂಡಿತು ಎಂದು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
ಗದಗನಲ್ಲಿ ಮಳೆ ಅವಾಂತರ: ಹಲವು ಮನೆಗಳಿಗೆ ನುಗ್ಗಿದ ನೀರು, ಜನರ ಆಕ್ರೋಶ!
ಇಲ್ಲಿಯ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡುತ್ತ ಬಂದಿದೆ. ಕಳಸಾ-ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಸರ್ಕಾರ ಅನುಕೂಲ ಮಾಡಿದರೆ ಮಾತ್ರ ಗೋವಾ ಸರ್ಕಾರದ ತಮ್ಮಾರ್ ವಿದ್ಯುತ್ ಪ್ರಸರಣ ಯೋಜನೆಯಡಿ ರಾಜ್ಯದಲ್ಲಿ ಮರ ಕಡಿಯುವ ಪ್ರಸ್ತಾವನೆಯನ್ನು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿಯವರು ಈಗಾಗಲೇ ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ ಎಂದರು.
ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಅಕ್ಟೋಬರ್ 5ರಿಂದ 10ರ ನಡುವೆ ಘೋಷಣೆಯಾಗಬಹುದು. ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಸೋಲಿಸಬೇಕಿದೆ ಎಂದು ಕರೆ ನೀಡಿದರು.
ನಿಗಮ-ಮಂಡಳಿ ಹಾಗೂ ಪಕ್ಷ ಸಂಘಟನೆಯಲ್ಲಿ ಈ ಭಾಗದವರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡುವ ಅವಶ್ಯಕತೆ ಇದೆ. ಈ ವಿಚಾರವನ್ನು ವರಿಷ್ಠರ ಗಮನಕ್ಕೆ ತರಲಾಗುವುದು. ನಮ್ಮ ಸಚಿವಾಲಯ, ಇಲಾಖೆಗೆ ಸಂಬಂಧಿಸಿದ ಈ ಭಾಗದ ಪ್ರಸ್ತಾವನೆ ಹಾಗೂ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲಾಗುವುದು ಎಂದು ಹೇಳಿದರು.
ಮಾಜಿ ಶಾಸಕ ಎಂ.ಎಸ್. ಅಕ್ಕಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಕಿತ್ತೂರ, ಪಾಲಿಕೆ ವಿಪಕ್ಷ ನಾಯಕ ರಾಜಶೇಖರ ಕಮತಿ, ಅಲ್ತಾಫ್ ಹಳ್ಳೂರು, ಅನಿಲಕುಮಾರ ಪಾಟೀಲ, ಎಫ್.ಎಚ್. ಜಕ್ಕಪ್ಪನವರ್, ಅನ್ವರ್ ಮುಧೋಳ, ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ, ದೊಡ್ಡರಾಮಪ್ಪ ದೊಡಮನಿ, ಮೋಹನ ಹಿರೇಮನಿ, ಪ್ರೇಮನಾಥ ಚಿಕ್ಕತುಂಬಳ, ಇತರರು ಇದ್ದರು.