ಬೆಂಗಳೂರು: ಬರಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರದ ಆರ್ಥಿಕ ದುಸ್ಥಿತಿ ಕಾರಣ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಬೇಕಾಗಿತ್ತು, ಬಾಯಿ ತಪ್ಪಿ ಕೇಂದ್ರ ಸರ್ಕಾರದ ಬದಲಿಗೆ ರಾಜ್ಯ ಸರ್ಕಾರ ಎಂದು ಹೇಳಿದಂತೆ ಕಾಣುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಬೊಮ್ಮಾಯಿ ವಿರುದ್ದ ಕಿಡಿಕಾರಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘವಾದ ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ರೈತರು ಬರಗಾಲದ ಬವಣೆಯಿಂದ ತತ್ತರಿಸಿಹೋಗಿದ್ದಾರೆ. ಬರಪರಿಹಾರದ ಕೆಲಸಗಳಿಗಾಗಿ 18,177 ಕೋಟಿ ರೂಪಾಯಿ ನೀಡಲು ಮೂರು ತಿಂಗಳುಗಳಿಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದೇವೆ. ಪತ್ರ ಬರೆದಿದ್ದೇವೆ, ಇಲ್ಲಿಯವರೆಗೆ ನಯಾಪೈಸೆ ಹಣ ನೀಡಿಲ್ಲ. ಕೇಂದ್ರ ಸರ್ಕಾರದ ಇಂತಹ ಕಠಿಣ ನಿಲುವಿಗೆ ಒಂದೋ ಸನ್ಮಾನ್ಯ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ದ್ವೇಷದ ರಾಜಕಾರಣ ಕಾರಣ ಇರಬಹುದು, ಇಲ್ಲದೆ ಇದ್ದರೆ ಕೇಂದ್ರ ಸರ್ಕಾರದ ಆರ್ಥಿಕ ದುಸ್ಥಿತಿ ಕಾರಣವಾಗಿರಬಹುದು. ಅದೇನು ಎನ್ನುವುದನ್ನು ಬೊಮ್ಮಾಯಿಯವರೇ ರಾಜ್ಯದ ಜನತೆಗೆ ಸ್ಪಷ್ಟೀಕರಣ ನೀಡಬೇಕು ಎಂದಿದ್ದಾರೆ.
ಮಳೆಗಾಲ ಕಳೆದುಹೋಗಿ ರಾಜ್ಯ ಬೇಸಿಗೆ ಕಾಲಕ್ಕೆ ಕಾಲಿಡುತ್ತಿದೆ. ಕಳೆದ ಆರು ತಿಂಗಳಿಂದ ಬರಪೀಡಿತ ಪ್ರದೇಶದ ರೈತರು ಕಡುಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಬರಪೀಡಿತ ರೈತ ಕುಟುಂಬಕ್ಕೆ ತಲಾ ಎರಡು ಸಾವಿರ ರೂಪಾಯಿ ನಗದಿನ ಜೊತೆ ಸಾಧ್ಯ ಇರುವ ಎಲ್ಲ ನೆರವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಅನ್ನಭಾಗ್ಯವೂ ಸೇರಿದಂತೆ ನಮ್ಮ ಗ್ಯಾರಂಟಿ ಯೋಜನೆಗಳಿಂದಾಗಿ ಜನತೆ ಕಷ್ಟ-ನಷ್ಟದ ನಡುವೆಯೂ ಉಸಿರಾಡುವಂತಾಗಿದೆ. ಹೀಗಿದ್ದರೂ ಕಟುಕನಂತೆ ವರ್ತಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ಬರಪರಿಹಾರ ನೀಡದೆ ಸತಾಯಿಸುತ್ತಿದೆ.