ಬೆಂಗಳೂರು:- ಚೈನಾ ನ್ಯುಮೋನಿಯಾ ಬಗ್ಗೆ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಚೈನಾ ನ್ಯುಮೋನಿಯಾ ಬಗ್ಗೆ ಕಟ್ಟೆಚ್ಚರ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಚೈನಾ ನ್ಯುಮೋನಿಯಾ ಹರಡುತ್ತಿದೆ ಎಂಬ ವರದಿಗಳ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಟಿಸಿದೆ. ಇದೇ ರೀತಿ ಕೇಂದ್ರ ಸರ್ಕಾರವೂ ಈ ಸಂಬಂಧ ಮಾರ್ಗಸೂಚಿ ಪ್ರಕಟಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ ಇದುವರೆಗೆ ಚೈನಾ ನ್ಯುಮೋನಿಯಾಗೆ ಸಂಬಂಧಿಸಿದ ವೈರಸ್ ಪತ್ತೆಯಾಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಆಸ್ಪತ್ರೆಗಳಲ್ಲೂ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಈ ಸಂಬಂಧ ಅಣಕು ಪ್ರದರ್ಶನ ನಡೆಸಿ ಎಚ್ಚರಿಕೆ ಮೂಡಿಸಬೇಕು ಎಂಬುದೂ ಸೇರಿದಂತೆ ಹಲವು ಬಗೆಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಬಳಕೆ ಮಾಡಲು ಆದ್ಯತೆ ನೀಡುವಂತೆ ಹೇಳಲಾಗಿದೆ ಎಂದರು.
ಜ್ವರ ಬಂದ ತಕ್ಷಣ ಜನ ಆಸ್ಪತ್ರೆಗಳಿಗೆ ತೆರಳಿ ವಿವಿಧ ಪರೀಕ್ಷೆಗಳಿಗೆ ಒಳಪಡಬೇಕು ಎಂದ ಅವರು, ಈ ಶೀತಜ್ವರ ಸಾಮಾನ್ಯವಾಗಿ ಐದು ದಿನಗಳವರೆಗೆ ಇರುತ್ತದೆ. ಹೀಗಾಗಿ ಯಾವ ಕಾರಣಕ್ಕೂ ನಿರ್ಲಕ್ಷಿಸಬಾರದು ಎಂದು ಹೇಳಿದರು. ವಯೋವೃದ್ಧರು ಮತ್ತು ಮಕ್ಕಳು ಎಚ್ಚರಿಕೆಯಿಂದ ಇರಬೇಕು. ಅದೇ ರೀತಿ ವಿವಿಧ ರೋಗಗಳಿಂದ ಬಳಲುತ್ತಿರುವವರು ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.