ಬೆಂಗಳೂರು:- ರಾಜ್ಯ ಸರ್ಕಾರವು ಐಪಿಎಸ್ ಪ್ರತಾಪ್ ರೆಡ್ಡಿ ರಾಜೀನಾಮೆ ಅಂಗೀಕರಿಸಿದೆ.
1991ರ ಬ್ಯಾಚ್ನ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರ ಸೇವಾವಧಿ ಇನ್ನೂ ನಾಲ್ಕುವರೆ ತಿಂಗಳು ಬಾಕಿ ಇರುವಾಗಲೇ ಸ್ವಯಂ ನಿವೃತ್ತಿ ಕೋರಿ ಜನವರಿ 22ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದೀಗ ಸರ್ಕಾರ ಪ್ರತಾಪ್ ರೆಡ್ಡಿಯವರ ಸ್ವಯಂ ನಿವೃತ್ತಿ ಪತ್ರವನ್ನು ಅಂಗೀಕರಿಸಿದ್ದು, ಏಪ್ರಿಲ್ 30 ಕ್ಕೆ ಇಲಾಖೆಯಿಂದ ಬಿಡುಗಡೆಗೊಳಿಸುಂವತೆ ಆದೇಶಿಸಿದೆ.
ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ (DGP) ಕಾರ್ಯ ನಿರ್ವಹಣೆ ಮಾಡುತ್ತಿದ್ದ ಪ್ರತಾಪ್ ರೆಡ್ಡಿ ವೈಯುಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದರು. ಬರುವ ಏಪ್ರಿಲ್ 30ಕ್ಕೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಪ್ರತಾಪ್ ರೆಡ್ಡಿ ಅವರು 1991ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದು ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರು. ಜು. 01 1964ರಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಸಿರುವ. ಪ್ರತಾಪ್ ರೆಡ್ಡಿ ಬಿ.ಟೆಕ್ ಪದವೀಧರರು. ಇವರು 1991ರಲ್ಲಿ ಕರ್ನಾಟಕ ಕೆಡರ್ನ ಐಪಿಎಸ್ ಅಧಿಕಾರಿಯಾಗಿ ಕಾರ್ಯವನ್ನು ಆರಂಭಿಸಿದ್ದರು. ಕರ್ನಾಟಕದಲ್ಲಿ ಹಾಸನ ಜಿಲ್ಲೆಯಲ್ಲಿ ಸಹಾಯಕ ಸೂಪರಿಟೆಂಡೆಂಟ್ ಆಗಿ ಪ್ರತಾಪ್ ರೆಡ್ಡಿ ಅವರು ಕೆಲಸ ಆರಂಭಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಎಸ್ಪಿಯಾಗಿ, ಸಿಐಡಿಯಾಗಿ ಹಲವಾರು ಮಹತ್ವದ ಪ್ರಕರಣಗಳನ್ನು ಭೇದಿಸಿದ್ದರು.
ಬ್ಯಾಂಕಿಂಗ್ ವಂಚನೆಗಳು, ಸೈಬರ್ ಕ್ರೈಂಗಳಲ್ಲಿ ಅವರು ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಅವರನ್ನು ಕಮಲ್ ಪಂತ್ ಅವರ ಬಳಿಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಲಾಗಿತ್ತು. ಬಳಿಕ ಅವರನ್ನು ವರ್ಗಾವಣೆ ಮಾಡಿ ದಯಾನಂದ್ ಅವರನ್ನು ನಗರ ಪೊಲೀಸ್ ಆಯುಕ್ತರಾಗಿ ಸರ್ಕಾರ ನೇಮಕ ಮಾಡಿತ್ತು. ಸಿ.ಎಚ್.ಪ್ರತಾಪ್ ರೆಡ್ಡಿ ಅವರು ಸಿಬಿಐನಲ್ಲಿಯೂ ಕೆಲಸ ಮಾಡಿದ್ದಾರೆ.