ಮುಂಬೈ: ಸಾಕಷ್ಟು ಮಂದಿ ತಮ್ಮ ಮೂಲ ಹೆಸರನ್ನು ಬದಿಗಿಟ್ಟು ಚಿತ್ರರಂಗದಲ್ಲಿ ಬೇರೆಯದ್ದೇ ಹೆಸರಿನಲ್ಲಿ ಸಖತ್ ಖ್ಯಾತಿ ಘಳಿಸಿದ್ದಾರೆ. ಇದೀಗ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 64 ವರ್ಷಗಳಾದ ಬಳಿಕ ಸ್ಟಾರ್ ನಟ ಧರ್ಮೇಂದ್ರ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
1960 ರಲ್ಲಿ ದಿಲ್ ಭಿ ತೇರಾ ಹಮ್ ಭಿ ತೇರೆ ಚಿತ್ರದ ಮೂಲಕ ನಟನೆಗೆ ಎಂಟ್ರಿಕೊಟ್ಟ ನಟ ಧರ್ಮೇಂದ್ರ ಇಂದಿಗೂ ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಸದ್ದು ಮಾಡ್ತಿದ್ದಾರೆ. ಇದೀಗ ಚಿತ್ರರಂಗ ಪ್ರವೇಶಿಸಿ 64 ವರ್ಷಗಳಾದ ಮೇಲೆ ನಟ ಧರ್ಮೇಂದ್ರ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ ಶಾಹಿದ್ ಕಪೂರ್ ಹಾಗೂ ಕೃತಿ ಸನೋನ್ ನಟನೆಯ ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ ಎಂದು ಹೇಳಲಾಗ್ತಿದೆ.
ಫೆಬ್ರವರಿ 09ರಂದು ಬಿಡುಗಡೆಯಾದ ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ ಚಿತ್ರವು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದು, ಈ ಸಿನಿಮಾದಲ್ಲಿ ಧರ್ಮೇಂದ್ರ ನಾಯಕ ನಟ ಶಾಹಿದ್ ಕಪೂರ್ ಅವರ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಚಿತ್ರದಲ್ಲಿ ಅವರ ಹೆಸರನ್ನು ಬೇರೆ ರೀತಿಯಲ್ಲಿ ತೋರಿಸಲಾಗಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಈ ಮೊದಲು ಸಿನಿಮಾಗಳಲ್ಲಿ ಧರ್ಮೇಂದ್ರ ಎಂದಷ್ಟೇ ಹೆಸರನ್ನು ತೋರಿಸಲಾಗುತ್ತಿತ್ತು. ಆದರೆ, ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ ಪ್ರದರ್ಶನದ ವೇಳೆ ಧರ್ಮೇಂದ್ರ ಸಿಂಗ್ ಡಿಯೋಲ್ ಎಂದು ಹೆಸರನ್ನು ತೋರಿಸಲಾಗಿದೆ. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಚಿತ್ರರಂಗಕ್ಕೆ ಕಾಲಿಟ್ಟು 64 ವರ್ಷಗಳ ಬಳಿಕ ಈ ರೀತಿ ಬದಲಾವಣೆ ಮಾಡಿದ್ದು ಹಲವರಲ್ಲಿ ಅಚ್ಚರಿ ಮೂಡಿಸಿದೆ.
ಈ ಕುರಿತು ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ ಚಿತ್ರತಂಡವಾಗಲಿ ನಟ ಧರ್ಮೇಂದ್ರ ಅವರಾಗಲೀ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.