ರಾಯಚೂರು: ತಾಯಿಗೆ ಸದಾ ಕಿರುಕುಳ ನೀಡುತ್ತಿದ್ದಾನೆ ಎಂಬ ಸಿಟ್ಟಿನಲ್ಲಿ ಮಗನೊಬ್ಬ ತಂದೆಯನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಂಡಿ ತಿಮ್ಮಣ್ಣ (55) ಎಂಬಾತನನ್ನು ಅವನ ಮಗ ಶೀಲವಂತ (32) ಕೊಲೆ ಮಾಡಿದ್ದಾನೆ. ಕೊಂದ ಬಳಿಕ ಮೊದಲು ಶವವನ್ನು ನಾಶ ಮಾಡಲು ಮುಂದಾಗಿದ್ದನಾದರೂ ಬಳಿಕ ಭಯಗೊಂಡು ತಾನೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.
ಬಂಡಿ ತಿಮ್ಮಪ್ಪ, ಅವನ ಪತ್ನಿ, ಮಗ ಶೀಲವಂತ, ಸೊಸೆ ಮತ್ತು ಇಬ್ಬರು ಮಕ್ಕಳು ಜತೆಯಾಗಿ ವಾಸಿಸುತ್ತಿದ್ದರು. ಬಂಡಿ ತಿಮ್ಮಣ್ಣ ಯಾವಾಗಲೂ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮಗ ಶೀಲವಂತ ಹಲವಾರು ಬಾರಿ ಹೇಳಿದರೂ ಜಗಳ ನಿಲ್ಲಲೇ ಇಲ್ಲ. ಇದರಿಂದ ಆತ ಕುಪಿತನಾಗಿದ್ದ ಎನ್ನಲಾಗಿದೆ. ಭಾನುವಾರದಂದು ಈ ಕುರಿತ ಮಾತುಕತೆ ತಾರಕಕ್ಕೆ ಏರಿದೆ. ಈ ವೇಳೆ ಉಂಟಾದ ಘರ್ಷಣೆಯಲ್ಲಿ ಕೊಲೆ ಸಂಭವಿಸಿದೆ. ಎಲ್ಲ ಕುಟುಂಬಿಕರ ಮುಂದೆಯೇ ಮಗ ತಂದೆಯನ್ನು ಕೊಂದು ಹಾಕಿದ್ದಾನೆ.
ಮನೆಯಲ್ಲಿ ಜಗಳ ಜೋರಾಗುತ್ತಿದ್ದಂತೆಯೇ ಶೀಲವಂತ ತನ್ನ ಸಣ್ಣ ಮಗನನ್ನು ಮೊದಲು ಒಂದು ಕೋಣೆಗೆ ಹೋಗುವಂತೆ ಹೇಳಿದ್ದಾನೆ. ಬಳಿಕ ಹೆಂಡತಿ ಮತ್ತು ಮಗಳ ಮುಂದೆಯೇ ಒಂದು ಕಲ್ಲು ತಂದು ತಂದೆಯ ತಲೆಯ ಮೇಲೆ ಎತ್ತಿ ಹಾಕಿದ್ದಾನೆ. ಮನೆಯಲ್ಲಿದ್ದವರು ತಡೆಯಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.
ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಬಂಡಿ ತಿಮ್ಮಪ್ಪ ಅಲ್ಲೇ ರಕ್ತ ಸ್ರಾವವಾಗಿ ಸಾವನ್ನಪ್ಪಿದ್ದಾನೆ. ಈ ನಡುವೆ, ಕೊಲೆ ಮಾಡಿದ ಮಗ ಪ್ರಕರಣ ಮುಚ್ಚಿ ಹಾಕಲು ಮೊದಲು ಯತ್ನಿಸಿದ್ದಾರೆ. ಶವವನ್ನು ಮನೆಯಿಂದ ಹೊರಗೆ ಎಳೆದು ತಂದು ದೇಹವನ್ನು ನಾಶ ಮಾಡಲು ಯತ್ನಿಸಿದ್ದಾನೆ. ಆದರೆ, ತೀವ್ರ ರಕ್ತಸ್ರಾವ ಆಗಿದ್ದರಿಂದ ಆತನ ಪ್ಲ್ಯಾನ್ ಯಶಸ್ವಿಯಾಗಲಿಲ್ಲ.
ಕೊನೆಗೆ ಅವನು ಅನಿವಾರ್ಯವಾಗಿ ಪೊಲೀಸ್ ಸಹಾಯವಾಣಿ 112 ಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ನಡುವೆ ಬಂಡಿ ತಿಮ್ಮಪ್ಪನ ಹೆಂಡತಿ ಮತ್ತು ಸೊಸೆ ಶೀಲವಂತನ ಪರವಾಗಿ ಮಾತನಾಡಿದ್ದಾರೆ. ಮನೆಯಲ್ಲಿ ಒಂದು ದಿನವೂ ನೆಮ್ಮದಿ ಇಲ್ಲದ ಪರಿಸ್ಥಿತಿ ಇತ್ತು. ಅನಗತ್ಯವಾಗಿ ಚಿತ್ರಹಿಂಸೆ ನೀಡುತ್ತಿದ್ದ.
ಅವನನ್ನು ತಡೆಯುವ ಪ್ರಯತ್ನಗಳ್ಯಾವುದೂ ಕೈಗೂಡಿರಲಿಲ್ಲ. ಇದೀಗ ಮಗ ಸಿಟ್ಟಿನಿಂದ ಈ ರೀತಿ ಮಾಡಿದ್ದಾನೆ ಎಂದು ಶೀಲವಂತನ ತಾಯಿ ಹೇಳಿದ್ದಾರೆ. ಆದರೆ, ಯಾರು ಏನೇ ಮಾಡಿದರೂ ಅದಕ್ಕೆ ಸೂಕ್ತವಾದ ನ್ಯಾಯದ ದಾರಿಗಳಿವೆ. ಅದನ್ನು ಬಿಟ್ಟು ಕೊಲೆ ಮಾಡುವುದು ಅಪರಾಧವಾಗುತ್ತದೆ ಎಂದು ಹೇಳಿರುವ ಪೊಲಿಸರು ಶೀಲವಂತನನ್ನು ಬಂಧಿಸಿದ್ದಾರೆ. ಮುಂದಿನ ಕ್ರಮಗಳನ್ನು ಜರುಗಿಸಲು ಸೂಚಿಸಲಾಗಿದೆ.