ಕಲಬುರ್ಗಿ:- ಜಿಲ್ಲೆಯಲ್ಲಿ ಕಾಲೇಜಿಗೆ ಹೋಗುವಂತೆ ಬೈದಿದ್ದಕ್ಕೆ ಬಾವಿಗೆ ಜಿಗಿದ ತಂಗಿ- ರಕ್ಷಿಸಲು ಹೋದ ಅಣ್ಣನೂ ಸಾವನ್ನಪ್ಪಿದ ಘಟನೆ ಜರುಗಿದೆ.
21 ವರ್ಷದ ಸಂದೀಪ್, 18 ವರ್ಷದ ನಂದಿನಿ ಎಂದು ಮೃತರನ್ನು ಗುರುತಿಸಲಾಗಿದೆ. ಈ ಘಟನೆ ಸೋಮವಾರ ಸಂಜೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ನಡೆದಿದೆ.
ನಂದಿನಿಗೆ ಕಾಲೇಜಿಗೆ ಹೋಗು ಎಂದು ಅಣ್ಣ ಸಂದೀಪ್ ಬೈದು ಬುದ್ಧಿವಾದ ಹೇಳಿದ್ದಾನೆ. ಇಷ್ಟಕ್ಕೆ ಬೇಸರಗೊಂಡ ನಂದಿನಿ ಹತ್ತಿರದ ಬಾವಿಗೆ ಹೋಗಿ ಜಿಗಿದಿದ್ದಾಳೆ. ಇತ್ತ ತಂಗಿ ಬಾವಿಗೆ ಹಾರಿದ ವಿಚಾರ ತಿಳಿಯುತ್ತಿದ್ದಂತೆಯೇ ಅಣ್ಣ ಸಂದೀಪ್ ಆಕೆಯನ್ನು ರಕ್ಷಣೆ ಮಾಡಲೆಂದು ತಾನೂ ಬಾವಿಗೆ ಹಾರಿದ್ದಾನೆ. ಪರಿಣಾಮ ಈಜು ಬಾರದೆ ತಂಗಿಯ ಜೊತೆ ಆತನೂ ಮೃತಪಟ್ಟಿದ್ದಾನೆ.
ಬಾವಿಯ ಪಕ್ಕದಲ್ಲಿ ಮೃತ ನಂದಿನಿ ತಲೆಗೆ ಮುಡಿದುಕೊಂಡ ಹೂವು ಬಿದ್ದಿರುವುದನ್ನು ಗಮನಿಸಿದ ಪಾಲಕರಿಗೆ ಅನುಮಾನ ಬಂದು ಹುಡುಕಾಟ ನಡೆಸಿದಾಗ ಅಣ್ಣ-ತಂಗಿಯ ಶವವಾಗಿ ಪತ್ತೆಯಾಗಿದ್ದಾರೆ.
ಈ ಬಗ್ಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.