ಬೆಂಗಳೂರು: ವೈದ್ಯಕೀಯ ವೃತ್ತಿ ಪವಿತ್ರವಾದದ್ದು. ಕೋವಿಡ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ತಮ್ಮ ಪ್ರಾಣದ ಹಂಗು ತೊರೆದು ರೋಗಿಗಳ ಆರೈಕೆ ಮಾಡಿದ ಅವರ ಸೇವೆಯು ಸ್ಮರಣೀಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪ್ರಶಂಸೆ ವ್ಯಕ್ತಪಡಿಸಿದರು.
ನಗರದ ಗಾಂಧಿ ಭವನದಲ್ಲಿ ರಾಘವಿ ಚಾರಿಟೇಬಲ್ ಟ್ರಸ್ಟ್ ಸೇವಾ ಫೌಂಡೇಶನ್ ಹಾಗೂ ಶ್ರೀ ಲಕ್ಷಿö್ಮ ಆಸ್ಪತ್ರೆಗಳ ಸಮೂಹ ಸಂಸ್ಥೆಯು ಆರೋಗ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಆರೋಗ್ಯ ಜ್ಯೋತಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ದಾದಿಯರು, ಸಿಬ್ಬಂದಿ ವರ್ಗದವರನ್ನು ಗುರುತಿಸಿ ಇದೇ ಮೊದಲ ಬಾರಿಗೆ ರಾಘವಿ ಚಾರಿಟೇಬಲ್ ಟ್ರಸ್ಟ್ ಸೇವಾ ಫೌಂಡೇಶನ್ ವತಿಯಿಂದ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್ ಮುಖ್ಯಸ್ಥ ರಾಘವೇಂದ್ರ ಮಾತನಾಡಿ, ಕೋವಿಡ್-೧೯ ನಮ್ಮೆಲ್ಲರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ನಮ್ಮ ವೈದ್ಯರು ಮತ್ತು ವೈದ್ಯಕೀಯ ಸಹಾಯಕ ಸಿಬ್ಬಂದಿ ಮಾರಣಾಂತಿಕ ಕೊರೋನ ವೈರಸ್ ವಿರುದ್ಧ ಹೋರಾಡಲು ವೈಯಕ್ತಿಕವಾಗಿಯೂ ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಇಂತಹ ನಿಸ್ವಾರ್ಥ ಸಿಬ್ಬಂದಿಯ ಸಾಧನೆಯನ್ನು ಗುರುತಿಸಿ 130 ಮಂದಿಗೆ ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಗರ ತಾಲೂಕಿನ ಶ್ರೀ ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತ ಸ್ವಾಮಿ ,ಶಾಸಕ ಬೇಳೂರು ಗೋಪಾಲಕೃಷ್ಣ, ಇಎಲ್ವಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್, ಶ್ರೀ ಲಕ್ಷಿö್ಮ ಆಸ್ಪತ್ರೆಗಳ ಸಮೂಹದ ವೈದ್ಯಕೀಯ ನಿರ್ದೇಶಕ ಡಾ.ಸಾಂಭಶಿವ, ಡಾ.ಅಂಜಿನಪ್ಪ, ನಟಿಯರಾದ ಪ್ರಿಯಾಂಕಾ ಉಪೇಂದ್ರ, ಕಾರುಣ್ಯರಾಮ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.