ಮಧುಮೇಹ ಒಂದು ದೀರ್ಘ ಕಾಲದ ಕಾಯಿಲೆ. ಒಮ್ಮೆ ಮಧುಮೇಹ ಬಂದರೆ ಸಾಯುವ ತನಕ ನಮ್ಮನ್ನು ಬಾಧಿಸುತ್ತಲೇ ಇರುತ್ತವೆ. ಮಧು ಮೇಹ ತೀವ್ರತೆ ಹೆಚ್ಚಾದರೆ ವಿವಿಧ ಅಂಗಾಂಗಗಳ ವೈಫಲ್ಯತೆ ಉಂಟಾಗುವುದು. ಮಸುಕಾದ ದೃಷ್ಟಿ ಸಮಸ್ಯೆಯು ಮೊದಲ ಆರೋಗ್ಯ ವೈಫಲ್ಯವಾಗಿ ಗೋಚರಿಸುವುದು. ಮಧುಮೇಹ ಆರೋಗ್ಯ ಸಮಸ್ಯೆಯ ದುರಾದೃಷ್ಟಕರ ಸಂಗತಿ ಎಂದರೆ ಮಧು ಮೇಹ ತೀವ್ರತೆ ಪಡೆದುಕೊಂಡರೆ ದೇಹದ ಕೆಲವು ಅಂಗಗಳ ಆರೋಗ್ಯವೂ ಹದಗೆಡುತ್ತವೆ.
ಯಾರಲ್ಲಿ ಹೆಚ್ಚು ತೊಂದರೆ ಕಾಡುವುದು?
ಮಧುಮೇಹ ಇರುವವರಲ್ಲಿ ದೃಷ್ಟಿ ದೋಷದ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಟೈಪ್-1 ಮತ್ತು ಟೈಪ್ -2 ಮಧುಮೇಹ ಇರುವ ಶೇ.25ರಷ್ಟು ಮಂದಿಯಲ್ಲಿ ದೃಷ್ಟಿ ಸಂಬಂಧಿತ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾದಾಗ ಕಣ್ಣಿನ ಕೆಳಭಾಗದಲ್ಲಿ ಇರುವ ಸೂಕ್ಷ್ಮ ಅಂಗಾಂಶಗಳ ಪೂರೈಕೆಯಾಗುವ ರಕ್ತನಾಳಗಳನ್ನು ಹಾನಿಗೊಳಿಸುತ್ತವೆ. ಆಗ ಕಣ್ಣಿನ ಆರೋಗ್ಯ ಸಮಸ್ಯೆ ಕಾಡುವುದು. ಹಾಗಾಗಿ ಮಧು ಮೇಹಿಗಳು ತಮ್ಮ ರಕ್ತದಲ್ಲಿ ಆದಷ್ಟು ಗ್ಲೂಕೋಸ್ ಪ್ರಮಾಣ ಸಮತೋಲಿತವಾಗಿ ಇರುವಂತೆ ನೋಡಿಕೊಳ್ಳಬೇಕು.
ಕಣ್ಣಿನ ಸಮಸ್ಯೆಯ ಲಕ್ಷಣಗಳು
ಮಧುಮೇಹಿಗಳು ಕಣ್ಣಿನ ಸಮಸ್ಯೆಗೆ ಒಳಗಾಗುವ ಮೊದಲು ಕೆಲವು ಲಕ್ಷಣಗಳನ್ನು ಅನುಭವಿಸುತ್ತಾರೆ. ಅಂತಹ ಸಮಯದಲ್ಲಿ ನಿಷ್ಕಾಳಜಿ ತೋರದೆ ಸೂಕ್ತ ಚಿಕಿತ್ಸೆ ಅಥವಾ ತಪಾಸಣೆಗೆ ಒಳಗಾಗಬೇಕು.
– ದೃಷ್ಟಿ ಮಂಜಾಗಿ ಕಾಣುವುದು. ಯಾವುದೇ ವಸ್ತುಗಳನ್ನು ನೋಡಿದರೂ ಅವು ಮಸುಕಾಗಿ ಗೋಚರಿಸುವುದು.
– ಒಂದೇ ಬಣ್ಣದ ವಿವಿಧ ಛಾಯೆಯನ್ನು ಗುರುತಿಸುವಲ್ಲಿ ವೈಫಲ್ಯತೆಯನ್ನು ಅನುಭವಿಸುವುದು.
– ಮಂದ ಬೆಳಕಿನಲ್ಲಿ ಯಾವುದೇ ವಸ್ತುವನ್ನು ನೋಡಲು ಕಣ್ಣು ಶ್ರಮಿಸುವುದು.
– ಕಣ್ಣಿನ ಆಯಾಸ ಹಾಗೂ ಅಸಹಜತೆ ಕಿರಿಕಿರಿಯನ್ನುಂಟುಮಾಡುವುದು.
ಕಣ್ಣಿನ ಮೇಲೆ ಮಧುಮೇಹದ ಪರಿಣಾಮಗಳು:
ಡಯಾಬಿಟಿಕ್ ರೆಟಿನೋಪತಿ:
ಮಧುಮೇಹಕ್ಕೆ ಸಂಬಂಧಿಸಿದ ಸಾಮಾನ್ಯ ಕಣ್ಣಿನ ಸಮಸ್ಯೆಗಳಲ್ಲಿ ಒಂದು ಡಯಾಬಿಟಿಕ್ ರೆಟಿನೋಪತಿ. ಈ ಸ್ಥಿತಿಯು ಕಣ್ಣಿನ ಹಿಂಭಾಗದಲ್ಲಿರುವ ಬೆಳಕಿನ ಸೂಕ್ಷ್ಮ ಅಂಗಾಂಶವಾದ ರೆಟಿನಾದಲ್ಲಿನ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹ ಹೊಂದಿರುವ ವ್ಯಕ್ತಿಗಳಲ್ಲಿ ದೀರ್ಘಕಾಲದ ಅಧಿಕ ರಕ್ತದ ಸಕ್ಕರೆಯ ಮಟ್ಟವು ರೆಟಿನಾದೊಳಗಿನ ಸಣ್ಣ ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಇದು ಅಸ್ಪಷ್ಟ ಅಥವಾ ವಿಕೃತ ದೃಷ್ಟಿಗೆ ಕಾರಣವಾಗಬಹುದು. ಚಿಕಿತ್ಸೆ ನೀಡದೆ ಬಿಟ್ಟರೆ ಸಂಪೂರ್ಣ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಡಯಾಬಿಟಿಕ್ ಮ್ಯಾಕ್ಯುಲರ್ ಎಡಿಮಾ:
ಕಣ್ಣುಗಳ ಮೇಲೆ ಪರಿಣಾಮ ಬೀರುವ ಮಧುಮೇಹದ ಮತ್ತೊಂದು ಪ್ರಮುಖ ಭಾಗವೆಂದರೆ ಡಯಾಬಿಟಿಕ್ ಮ್ಯಾಕ್ಯುಲರ್ ಎಡಿಮಾ (DME). ಮ್ಯಾಕುಲಾ ರೆಟಿನಾದ ಮಧ್ಯಭಾಗದಲ್ಲಿರುವ ಒಂದು ಸಣ್ಣ ಪ್ರದೇಶವಾಗಿದ್ದು, ತೀಕ್ಷ್ಣವಾದ ಮತ್ತು ಸ್ಪಷ್ಟವಾದ ದೃಷ್ಟಿಗೆ ಕಾರಣವಾಗಿದೆ. ಡಯಾಬಿಟಿಕ್ ರೆಟಿನೋಪತಿಯಲ್ಲಿ, ಹಾನಿಗೊಳಗಾದ ರಕ್ತನಾಳಗಳು ಮಕ್ಯುಲಾವನ್ನು ಪ್ರವೇಶಿಸಲು ದ್ರವವನ್ನು ಉಂಟುಮಾಡಬಹುದು ಮತ್ತು ಮ್ಯಾಕುಲಾ ಊದಿಕೊಳ್ಳಬಹುದು. ಇದರಿಂದಾಗಿ ಒದಲು ಮತ್ತು ಮುಖಗಳನ್ನು ಗುರುತಿಸಲು ಕಷ್ಟವಾಗುವ ಸಾಧ್ಯತೆ ಹೆಚ್ಚಿದೆ.
ಕಣ್ಣಿನ ಪೊರೆ:
ಕಣ್ಣಿನ ಪೊರೆಯು ಕಣ್ಣಿನೊಳಗಿನ ಮಸೂರದ ಮೇಲೆ ಪೊರೆಯಂತೆ ಹುಟ್ಟಿಕೊಳ್ಳುತ್ತದೆ. ಕಾಲ ಕ್ರಮೇಣ ಇದು ದೃಷ್ಟಿ ದೋಷಕ್ಕೆ ಕಾರಣವಾಗುತ್ತದೆ. ಮಧುಮೇಹವು ಮಸೂರದ ಪ್ರೋಟೀನ್ಗಳ ಚಯಾಪಚಯವನ್ನು ಬದಲಾಯಿಸುವ ಮೂಲಕ ಕಣ್ಣಿನ ಪೊರೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಮಧುಮೇಹ ಹೊಂದಿರುವ ಜನರು ಕಿರಿಯ ವಯಸ್ಸಿನಲ್ಲಿ ಕಣ್ಣಿನ ಪೊರೆಗಳಂತಹ ಲಕ್ಷಣಗಳು ಕಂಡು ಬರುತ್ತವೆ.
ಇಂತಹ ಸಮಸ್ಯೆಯಿಂದ ನೀವು ಹೊರಬರಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು, ಆರೋಗ್ಯಕರ ಆಹಾರದ ಸೇವನೆ ಅಗತ್ಯವಾಗಿದೆ ಇದರ ಜೊತೆಗೆ 6ತಿಂಗಳಿಗೊಮ್ಮೆ ನೇತ್ರಶಾಸ್ತ್ರಜ್ಞರನ್ನು ಭೇಟಿ ಮಾಡಿ ನಿಯಮಿತ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.