ಮುಂಬೈ: ಫೆಬ್ರವರಿ 29, 2024ರ ನಂತರ ಪೇಟಿಎಂ, ತನ್ನ ಯಾವುದೇ ಗ್ರಾಹಕ ಖಾತೆ, ಪ್ರಿಪೇಯ್ಡ್ ಉಪಕರಣಗಳು, ವ್ಯಾಲೆಟ್ಗಳು ಮತ್ತು ಫಾಸ್ಟ್ಟ್ಯಾಗ್ಗಳಲ್ಲಿ ಠೇವಣಿ ಅಥವಾ ಟಾಪ್-ಅಪ್ಗಳನ್ನು ಸ್ವೀಕರಿಸದಂತೆ ಆರ್ಬಿಐ ನಿರ್ಬಂಧ ವಿಧಿಸಿದೆ.
Paytm ಪಾವತಿಗಳ ಬ್ಯಾಂಕ್ ಲಿಮಿಟೆಡ್ PPBL ನ ಸಮಗ್ರ ಆಡಿಟ್ ವರದಿ ಮತ್ತು ಬಾಹ್ಯ ಲೆಕ್ಕಪರಿಶೋಧನೆ ನಂತರ ರಿಸರ್ವ್ ಬ್ಯಾಂಕ್ ಈ ಕ್ರಮ ತೆಗೆದುಕೊಂಡಿದೆ. ನಿರಂತರ ಅನುವರ್ತನೆಗಳು ಮತ್ತು ಮುಂದುವರಿದ ಮೇಲ್ವಿಚಾರಣೆಗಳ ವರದಿಯನ್ನು ಆಧರಿಸಿ ಈ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ತನ್ನ ಹೇಳಿಕೆಯಲ್ಲಿ ಆರ್ಬಿಐ ತಿಳಿಸಿದೆ.
ಆರ್ಬಿಐನ ನಿರ್ಬಂಧ ಕ್ರಮಕ್ಕೆ ಕಾರಣಗಳಿವು…
- ಕೆವೈಸಿ ದಾಖಲೆಗಳು ಸರಿಯಾಗಿರಲಿಲ್ಲ
- ಮನಿ ಲಾಂಡರಿಂಗ್ ಕಾನೂನುಗಳ ಪಾಲನೆಯಾಗಿಲ್ಲ
- ರಿಲೇಟೆಡ್ ಪಾರ್ಟಿ ವಹಿವಾಟು ನಿಯಮಗಳ ಉಲ್ಲಂಘನೆಯಾಗಿದೆ.
- ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಈ ಪೇಮೆಂಟ್ಸ್ ಬ್ಯಾಂಕ್ ಮೇಲೆ ಪರೋಕ್ಷ ನಿಯಂತ್ರಣ ಹೊಂದಿರುವ ಸಾಧ್ಯತೆ
ಏನಿದು ಕೆವೈಸಿ ಲೋಪ?
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಸಿಸ್ಟಂ ಆಡಿಟ್ ಅನ್ನು ಆರ್ಬಿಐ ನಡೆಸಿದಾಗ ಹಲವು ಲೋಪದೋಷಗಳು ಬೆಳಕಿಗೆ ಬಂದಿದ್ದವು. ಅದರಲ್ಲಿ ಪ್ರಮುಖವಾದುದು ಕೆವೈಸಿ ದಾಖಲೆಯ ವಿಚಾರ. ಕ್ಲೈಂಟ್ಗಳಿಂದ ಸರಿಯಾದ ಕೆವೈಸಿ ದಾಖಲೆಗಳನ್ನು ಪಡೆಯಲಾಗಿಲ್ಲ. ಈ ಮೂಲಕ ಅಕ್ರಮ ಹಣ ವರ್ಗಾವಣೆಯ ಸಾಧ್ಯತೆ ಹೆಚ್ಚಾಗಿದೆ. ಪೇಟಿಎ ಬ್ಯಾಂಕ್ನಲ್ಲಿ ವಹಿವಾಟು ಆಗುವ ಹಣದ ಮೂಲವನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಕ್ಲೈಂಟ್ಗಳನ್ನು ಸೇರಿಸಿಕೊಳ್ಳುವಾಗ ಕೆವೈಸಿ ದಾಖಲೆಗಳ ಮೂಲಕ ಅವರ ಹಿನ್ನೆಲೆಯನ್ನು ಪರಿಶೀಲಿಸುವ ಗೊಡವೆಗೆ ಹೋಗಲಾಗಿಲ್ಲ ಎಂಬುದು ಆರ್ಬಿಐ ಆಕ್ಷೇಪವಾಗಿದೆ.
ಸರಿಯಾದ ಕೆವೈಸಿ ದಾಖಲೆಗಳಿಲ್ಲದ ವರ್ತಕ ಖಾತೆ (Merchant Account) ಮೂಲಕ ದೊಡ್ಡ ಪ್ರಮಾಣದ ವಹಿವಾಟುಗಳಾಗಿರುವುದನ್ನು ಆಡಿಟಿಂಗ್ ವೇಳೆ ಪತ್ತೆ ಮಾಡಲಾಗಿತ್ತು. ಈ ಬಗ್ಗೆ ಪೇಟಿಎಂ ಬ್ಯಾಂಕ್ಗೆ ಆರ್ಬಿಐ ಪದೇ ಪದೇ ಎಚ್ಚರಿಕೆ ನೀಡುತ್ತಿತ್ತು. ಆದರೆ, ಬ್ಯಾಂಕ್ ತನ್ನ ನಡವಳಿಕೆ ತಿದ್ದಿಕೊಳ್ಳಲಿಲ್ಲ ಎನ್ನಲಾಗಿದೆ.
ರಿಲೇಟೆಡ್ ಪಾರ್ಟಿ ವಹಿವಾಟು
ಪೇಟಿಎಂ ಪೇಮೆಂಟ್ಸ್ ಬ್ಯಾಂಕು ಮತ್ತು ಪೇಟಿಎಂ ಮೊದಲಾದವುಗಳು ಸೋದರ ಸಂಸ್ಥೆಗಳೇ ಆದರೂ ಕಾನೂನು ಪ್ರಕಾರ, ಪೇಟಿಎಂ ಪೇಮೆಂಟ್ ಬ್ಯಾಂಕು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಬ್ಯಾಂಕು ಸ್ವಾಯತ್ತವಾಗಿರಬೇಕು. ಆದರೆ,
ಪೇಟಿಎಂ ಗ್ರೂಪ್ ಮತ್ತು ಬ್ಯಾಂಕ್ ಮಧ್ಯೆ ಅವಲಂಬನೆ ಮತ್ತು ವ್ಯವಹಾರ ಬಹಳ ಗಾಢವಾಗಿತ್ತು. ಪೇಮೆಂಟ್ ಬ್ಯಾಂಕ್ ಅನ್ನು ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಪರೋಕ್ಷವಾಗಿ ನಿಯಂತ್ರಿಸುವ ಸಾಧ್ಯತೆ ಇರುವುದು ಆರ್ಬಿಐಗೆ ಮೇಲ್ನೋಟಕ್ಕೆ ತೋರಿದೆ. ಇದೂ ಕೂಡ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್ಬಿಐ ಮುಗಿಬೀಳಲು ಕಾರಣವಾಗಿದೆ ಎಂದು ಹೇಳಲಾಗಿದೆ.