ವಿಜಯಪುರ:– ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಏನು ಮಾತನಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇಂಥ ವಿಷಯಗಳಲ್ಲಿ ಬಹಿರಂಗವಾಗಿ ಚರ್ಚಿಸದೆ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡುತ್ತೇವೆ ಎಂದರು.
ಅಪ್ಪಟ ಕಾಂಗ್ರೆಸ್ಸಿಗರಾದ ಬಿ.ಕೆ.ಹರಿಪ್ರಸಾದ್ ಬದ್ಧತೆಯನ್ನು ನಾವ್ಯಾರೂ ಪ್ರಶ್ನೆ ಮಾಡುವುದಿಲ್ಲ, ಪ್ರಶ್ನೆ ಮಾಡಲೂ ಅಗದು. ಅನೇಕ ಸಂದರ್ಭಗಳಲ್ಲಿ ಅವರು ಸಲಹೆ, ಸೂಚನೆ ಕೊಟ್ಟಿದ್ದಾರೆ. ಎಲ್ಲ ಸಮುದಾಯಗಳಿಗೂ ಅನುದಾನ ಕೊಡಿ ಎಂದು ಹೇಳಿರುತ್ತಾರೆ. ಹಿಂದುಳಿದ ಸಮುದಾಯಗಳ ನಾಯಕರಾದ ಅವರು ಜನರ ನೋವನ್ನು ಅರ್ಥೈಸಿಕೊಂಡವರು. ಹೀಗಾಗಿ ಎಲ್ಲರಿಗೂ ಅನುದಾನ ಕೊಡಿ ಎಂದು ಹೇಳಿರಬಹುದು, ಅದರಲ್ಲೇನು ತಪ್ಪಿದೆ ಎಂದು ಪ್ರಶ್ನಿಸಿದರು.
ನೋಣವಿನಕೆರೆ ಸ್ವಾಮೀಗಳು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗಲಿ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ. ಮುಖ್ಯಮಂತ್ರಿ ಮಾಡುವ ವಿಷಯ ಕಾಂಗ್ರೆಸ್ ಪಕ್ಷದ ವರಿಷ್ಠರ ಕೈಯ್ಯಲ್ಲಿರುತ್ತದೆ ಎಂದರು.