ಬ್ಯಾಂಕಾಕ್: ಮೃಗಾಲಯದ ನೌಕರರೊಬ್ಬರು ಮೊಸಳೆ ಬಾಯಲ್ಲಿ ತಲೆ ಇಟ್ಟು ಸಾಹಸ ಪ್ರದರ್ಶನ ಮಾಡಲು ಹೋಗಿ ಅವಾಂತರ ಸೃಷ್ಟಿಸಿಕೊಂಡ ಘಟನೆ ಥೈಲ್ಯಾಂಡ್ನಲ್ಲಿ ನಡೆದಿದೆ. ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯು ಮೊಸಳೆಯ ಬಾಯಲ್ಲಿ ಎರಡು ಕಡ್ಡಿಗಳನ್ನ ಇಟ್ಟು ಟ್ರಿಕ್ಸ್ ಮಾಡೋದನ್ನ ನೋಡಬಹುದು. ಈ ವೇಳೆ ಬಾಯಿ ತೆರೆದುಕೊಂಡಿದ್ದ ಮೊಸಳೆ ಏನೂ ಮಾಡದೆ ಸುಮ್ಮನೆ ಇತ್ತು.
ನಂತರ ಮೊಸಳೆ ಬಾಯೊಳಗೆ ಆ ವ್ಯಕ್ತಿ ತನ್ನ ತಲೆಯನ್ನು ಇಟ್ಟಿದ್ದಾರೆ. ಕೆಲವು ಸಕೆಂಡ್ಗಳ ಕಾಲ ಮೊಸಳೆ ಬಾಯಿ ತೆರೆದುಕೊಂಡೇ ಇತ್ತು. ಆದ್ರೆ ಇದ್ದಕ್ಕಿದ್ದಂತೆ ಬಾಯಿ ಮುಚ್ಚಿ ತಲೆ ಹಿಡಿದು ಎಳೆದಾಡಿದೆ. ನಂತರ ಆ ವ್ಯಕ್ತಿಯನ್ನ ಬಿಟ್ಟು ಪಕ್ಕದಲ್ಲಿದ್ದ ನೀರಿನ ಕೊಳದೊಳಗೆ ಹೋಗಿದೆ. ಮೊಸಳೆ ಬಾಯಿಗೆ ತಲೆ ಕೊಟ್ಟ ವ್ಯಕ್ತಿ ನೋವಿನಿಂದ ನರಳಾಡಿದ್ದಾರೆ.
ಇಲ್ಲಿನ ಕೊಹ್ ಸಮುಯ್ನಲ್ಲಿ ಕಳೆದ ಭಾನುವಾರ ಈ ಘಟನೆ ನಡೆದಿದ್ದು, ಪ್ರವಾಸಿಗರೊಬ್ಬರು ಇದನ್ನ ವಿಡಿಯೋ ಮಾಡಿದ್ದಾರೆ. ಆಂಗ್ಲ ಪತ್ರಿಕೆಯೊಂದರ ವರದಿಯ ಪ್ರಕಾರ ಈ ವ್ಯಕ್ತಿ ಇದಕ್ಕೂ ಮೊದಲು ಮೊಸಳೆಗಳಿಂದಾಗಿ ಆಗಿದ್ದ ಗಾಯ, ಕಟ್ ಆಗಿದ್ದ ಬೆರಳನ್ನ ತೋರಿಸಿದ್ದರು ಎನ್ನಲಾಗಿದೆ. ಮೊಸಳೆ ಬಾಯಿಗೆ ಸಿಲುಕಿ ಗಾಯಗೊಂಡ ಬಳಿಕ ವ್ಯಕ್ತಿಯ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.