ರಾಮನಗರ:- ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸೋದರರ ದಬ್ಬಾಳಿಕೆ ಕೊನೆಯಾಗ್ಬೇಕು ಎಂದು ಸಿಪಿ ಯೋಗೇಶ್ವರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಜನ ಮತ್ತು ಅಧಿಕಾರಿಗಳೊಂದಿಗೆ ಸುರೇಶ್ ನಡೆದುಕೊಳ್ಳುವ ರೀತಿ, ಸಂಸತ್ತಿನ ಒಳಗೆ ಮಮತ್ತು ಹೊರಗೆ ಅವರ ವರ್ತನೆ, ದೇಶವಿರೋಧಿ ಹೇಳಿಕೆ ಕ್ಷೇತ್ರದಲ್ಲಿ ಅವರ ವಿರೋಧಿ ಅಲೆಯನ್ನು ಸೃಷ್ಟಿಸಿವೆ ಎಂದರು.
ಅವರ ವರ್ತನೆಗೆ ತದ್ವಿರುದ್ಧವಾಗಿ ಡಾ ಮಂಜುನಾಥ್ ಸಜ್ಜನ, ವಿದ್ಯಾವಂತ ಮತ್ತು ಸುಸಂಸ್ಕೃತ ವ್ಯಕ್ತಿಯಾಗಿದ್ದಾರೆ. ಒಬ್ಬ ವೈದ್ಯನಾಗಿ 4 ದಶಕಗಳಿಗೂ ಹೆಚ್ಚು ಕಾಲ ಜನ ಸೇವೆ ಮಾಡಿದ್ದಾರೆ. ಇಂಥವರನ್ನು ಜನ ತಮ್ಮ ಪ್ರತಿನಿಧಿಯಾಗಿ ಹೊಂದಲು ಇಷ್ಟಪಡುತ್ತಾರೆ ಎಂದು ಯೋಗೇಶ್ವರ್ ಹೇಳಿದರು.
ಜೆಡಿಎಸ್ ಜೊತೆ ಮಾಡಿಕೊಂಡಿರುವ ಮೈತ್ರಿ ಬಗ್ಗೆ ಮಾತಾಡಿದ ಅವರು, ರಾಜಕೀಯದಲ್ಲಿ ನಿರ್ಧಾರಗಳು ಆಯಾ ಕಾಲಘಟ್ಟಕ್ಕೆ ತಕ್ಕಂತೆ ತೆಗೆದುಕೊಳ್ಳಬೇಕಾಗುತ್ತದೆ. ಕಳೆದ ಸಲ ಮೈತ್ರಿ ಇಲ್ಲದೆ 25 ಸ್ಥಾನ ಸಿಕ್ಕಿದ್ದವು, ಈ ಬಾರಿ ಎಲ್ಲ 28 ಸ್ಧಾನಗಳನ್ನು ಗೆಲ್ಲುವ ಮತ್ತು ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಯೋಗೇಶ್ವರ್ ಹೇಳಿದರು.