ರಾಂಬುಟಾನ್ ಆಗ್ನೇಯ ಏಷ್ಯಾದ ಸ್ಥಳೀಯ ಹಣ್ಣು. ಇದು 80 ಅಡಿ ಎತ್ತರವನ್ನು ತಲುಪುವ ಮರದಲ್ಲಿ ಬೆಳೆಯುತ್ತದೆ. ಮಲೇಷ್ಯಾ ಮತ್ತು ಇಂಡೋನೇಷ್ಯಾದಂತಹ ಉಷ್ಣವಲಯದ ಹವಾಮಾನದಲ್ಲಿ ಈ ಹಣ್ಣು ಉತ್ತಮವಾಗಿ ಬೆಳೆಯುತ್ತದೆ. ನಮ್ಮ ದೇಶದಲ್ಲಿ ಇತ್ತೀಚೆಗೆ ಕಾಲಿಟ್ಟ ವಿದೇಶಿ ಹಣ್ಣು ಇದು. ಮಾರುಕಟ್ಟೆಯಲ್ಲಿ ಲಭ್ಯವಿದ್ದ ಈ ವಿದೇಶಿ ಹಣ್ಣನ್ನು ಈಗ ನಮ್ಮ ನಾಡಿನಲ್ಲಿಯೂ ಬೆಳೆಯಲಾಗುತ್ತಿದೆ. ಈ ಹಣ್ಣಿಗೆ ಒಳ್ಳೆಯ ಬೇಡಿಕೆಯಂತೂ ಇದೆ. ಹೀಗಾಗಿ ಇದನ್ನು ಬೆಳೆದ ರೈತರು ಹೆಚ್ಚು ರಿಸ್ಕೇ ಇಲ್ಲದೆ ವರ್ಷ ವರ್ಷವೂ ಲಕ್ಷಾಂತರ ರೂಪಾಯಿ ಆದಾಯವ ಕಾಣಬಹುದು.
ಇದು ಮಲೇಷ್ಯಾದ ಹಣ್ಣು
ರಂಬುಟಾನ್ ಲೀಚಿ ಜಾತಿಯ ಹಣ್ಣು. ಈ ಹಣ್ಣಿನ ಮೂಲ ಮಲೇಷ್ಯಾ. ಆಗ್ನೇಯ ಏಷ್ಯಾದ ಭಾಗದ ದೇಶಗಳಲ್ಲಿ ರಂಬುಟಾನ್ ಹಣ್ಣನ್ನು ಬೆಳೆಯಲಾಗುತ್ತದೆ. ಅದರಲ್ಲೂ ಥೈಲ್ಯಾಂಡ್ ಜಗತ್ತಿನಲ್ಲಿಯೇ ಅತಿ ಹೆಚ್ಚು ರಂಬುಟಾನ್ ಬೆಳೆಯುವ ಮತ್ತು ರಫ್ತು ಮಾಡುವ ದೇಶ. ಥೈಲ್ಯಾಂಡ್, ಇಂಡೋನೇಷ್ಯಾ, ಮಲೇಷ್ಯಾ ಕೇವಲ ಈ ಮೂರು ದೇಶಗಳೇ ಜಗತ್ತಿಗೆ ಬೇಕಾಗುವ ಶೇಕಡ 95 ಕ್ಕೂ ಹೆಚ್ಚು ರಂಬುಟಾನ್ ಹಣ್ಣುಗಳನ್ನು ಬೆಳೆಯುತ್ತವೆ.
ಬೆಳ್ಳಂ ಬೆಳಗ್ಗೆ ಟೀ ಜೊತೆಗೆ ಬಿಸ್ಕತ್ ತಿಂತೀರಾ..? ಹಾಗಾದ್ರೆ ಈ ಅಭ್ಯಾಸ ಈಗ್ಲೇ ಬಿಟ್ಟು ಬಿಡಿ!
ವರ್ಷಕ್ಕೆ 1.5 ಮಿಲಿಯನ್ ಟನ್ ರಂಬುನ್ ಹಣ್ಣುಗಳನ್ನು ಬೆಳೆಯಲಾಗುತ್ತದೆ. ರಂಬುಟ್ ಎಂದರೆ ಮಲೇಷಿಯನ್ ಭಾಷೆಯಲ್ಲಿ ರೋಮ ಎಂದರ್ಥ. ಹಣ್ಣಿನ ಮೇಲ್ಮೈ ಮೃದುವಾದ ಮುಳ್ಳುಗಳಿಂದ ರಚನೆಯಾಗಿರುವುದರಿಂದ ಈ ಹಣ್ಣಿಗೆ ರಂಬುಟಾನ್ ಎಂದು ಹೆಸರು ಬಂದಿದೆ. ನೋಡಲು ಕರೋನಾ ವೈರಸ್ ಕಾಣುವ ಈ ಹಣ್ಣನ್ನು ಕರೋನಾ ಫ್ರೂಟ್ ಎಂದೂ ತಮಾಷೆ ಮಾಡಲಾಗುತ್ತಿದೆ.
ಈ ಹಣ್ಣಿನಲ್ಲಿ ಫೈಬರ್ ಅಂಶ ಇರುವುದರಿಂದ ರೆಗ್ಯುಲರ್ ಡಯೆಟ್ ಮಾಡುವವರಿಗೆ ಒಳ್ಳೆಯದು. ಹೃದಯ ಸಂಬಂಧಿ ಸಮಸ್ಯೆಗಳ ಉಪಶಮನಕ್ಕೂ ಈ ಹಣ್ಣಿನ ಸೇವನೆ ತುಂಬಾ ಉಪಯುಕ್ತ.ರಂಬುಟಾನ್ ಹಣ್ಣಿನ ನಿರಂತರ ಸೇವನೆಯಿಂದ ಚರ್ಮ ಸುಕ್ಕುಗಟ್ಟುವುದು ಕಡಿಮೆಯಾಗಿ ಕಾಂತಿ ಹೆಚ್ಚಾಗುತ್ತದೆ. ಹೀಗೆ ಆರೋಗ್ಯ ವೃದ್ಧಿಯ ಸಾಕಷ್ಟು ಉಪಯೋಗಗಳು ಈ ಹಣ್ಣಿನಲ್ಲಿ ಅಡಕವಾಗಿರುವುದರಿಂದ ಈ ಹಣ್ಣಿಗೆ ಬೇಡಿಕೆ ಮತ್ತು ಬೆಲೆಯೂ ಹೆಚ್ಚು, ಮಾರ್ಕೆಟ್ ನಲ್ಲಿ ಒಂದು ಕೆಜಿ ರಂಬುಟಾನ್ ಹಣ್ಣಿಗೆ 300 ರಿಂದ 400 ರೂಪಾಯಿ ಬೆಲೆ ಇರುತ್ತದೆ.
ಇದರ ಕೃಷಿ ಹೇಗೆ?
ರಂಬುಟಾನ್ ನಮ್ಮ ದೇಶದ ಬೆಳೆಯಲ್ಲ. ತೀರಾ ಕೆಲ ವರ್ಷಗಳ ಹಿಂದಷ್ಟೇ ದೇಶಕ್ಕೆ ಪರಿಚಯವಾದ ಗಿಡ. ಅದಕ್ಕೂ ಮೊದಲು ಕೇರಳದಲ್ಲಿ ಬೆರಳೆಣಿಕೆಯಷ್ಟು ರೈತರು ತುಂಬಾ ಕಡಿಮೆ ಸಂಖ್ಯೆಯಲ್ಲಿ ಗಿಡ ಬೆಳೆಸಲು ಆರಂಭಿಸಿದ್ದರು. ಇಂತಹ ಹೆಚ್ಚು ಪರಿಚಯವಿಲ್ಲದ ರಂಬುಟಾನ್ ನನ್ನು ಒಂದೇ ಬಾರಿ ಹತ್ತಾರು ಎಕರೆಯಲ್ಲಿ ಬೆಳೆಯುವುದಕ್ಕಿಂತ ಆರಂಭದಲ್ಲಿ 1 ಎಕರೆಯಲ್ಲಿ ಬೆಳೆದರೆ ಉತ್ತಮ. ಇದು ಟ್ರೈಯಲ್ ಕ್ರಾಪ್ ನಂತಾಗುತ್ತೆ. ಈ ಗಿಡ ಗೇರು ಮರದಂತೆ ವಿಶಾಲವಾಗಿ ರೆಂಬೆ ಕೊಂಬೆಗಳನ್ನು ಬಿಡುವುದರಿಂದ ಕನಿಷ್ಠ 15 ಅಡಿ ಅಂತರದಲ್ಲಿ ಸಸಿ ನೆಡಬೇಕು, ಅದಕ್ಕಿಂತಲೂ ಹೆಚ್ಚಿನ ಅಂತರದಲ್ಲಿ ಬೆಳೆದರೂ ಉತ್ತಮ.
ಹೀಗಾಗಿ 1 ಎಕರೆಯಲ್ಲಿ 130 ಗಿಡಗಳಷ್ಟೇ ನೆಡಲು ಸಾಧ್ಯ, 2 ವರ್ಷದ ಒಂದು ಗಿಡಕ್ಕೆ 350 ರಿಂದ 500 ರೂಪಾಯಿವರೆಗೂ ಬೆಲೆ ಇರುತ್ತದೆ, ಸರಾಸರಿ 400 ರೂಪಾಯಿ ಅಂತಾದರೂ 130 ಗಿಡಕ್ಕೆ 50 ಸಾವಿರ ರೂಪಾಯಿಗೂ ಹೆಚ್ಚಾಗುತ್ತದೆ, ಒಂದು ಗುಂಡಿ ತಗೆಯಲು, ಗಿಡ ನೆಡಲು, ಅದಕ್ಕೆ ಆಗುವ ಗೊಬ್ಬರ ಖರ್ಚು ಡ್ರಿಪ್ ಇರಿಗೇಶನ್ ಖರ್ಚು ಸೇರಿ ಆರಂಭದಲ್ಲಿ ಒಂದು ಎಕರೆಗೆ ಗರಿಷ್ಠ ಒಂದು ಲಕ್ಷ ರೂಪಾಯಿ ಬಂಡವಾಳ ಹೂಡಬೇಕಾಗುತ್ತದೆ.
ರಂಬುಟಾನ್ ಬೆಳೆ ಸಾಮಾನ್ಯವಾಗಿ ಕೆಂಪು ಮಣ್ಣು, ಕಪ್ಪು ಮಣ್ಣು, ಕಲ್ಲು ಮರಳು ಮಿಶ್ರಿತ ಮಣ್ಣಲ್ಲೂ ಬೆಳೆಯುತ್ತದೆ. ಆದರೆ ಈ ಬೆಳೆಗೆ ಮಣ್ಣಿಗಿಂತ ಹವಾಗುಣವೇ ತುಂಬಾ ಮುಖ್ಯ. ಏಕೆಂದರೆ ಇದು ಟ್ರಾಪಿಕಲ್ ಕ್ರಾಪ್. ಅಂದರೆ ಉಷ್ಣವಲಯದಲ್ಲಿ ಬೆಳೆಯುವಂತಹ ಬೆಳೆ. ಸಮಭಾಜಕ ವೃತ್ತದ 15 ರಿಂದ 20 ಡಿಗ್ರಿಯಲ್ಲಿರುವ ಉಷ್ಣವಲಯ ಪ್ರದೇಶಗಳಲ್ಲಿ ರಂಬುಟಾನ್ ಉತ್ತಮವಾಗಿ ಬೆಳೆಯುತ್ತದೆ.
ಉದಾಹಣೆಯೊಂದಿಗೆ ಸಿಂಪಲ್ ಆಗಿ ಹೇಳಬೇಕೆಂದರೆ ಕರ್ನಾಟಕದ ಕರಾವಳಿ ಜಿಲ್ಲೆಗಳು ಮತ್ತು ಅದಕ್ಕೆ ಹೊಂದಿರುವ ಪ್ರದೇಶಗಳು, ಕೇರಳ ಮತ್ತು ತಮಿಳು ನಾಡಿನ ಇಂತಹ ಪ್ರದೇಶಗಳಲ್ಲಿನ ಉಷ್ಣ ವಾತಾವರಣ. ಮಳೆಯೂ ಆಗಬೇಕು, ಸೂರ್ಯನ ಬಿಸಿಲೂ ಹೆಚ್ಚಾಗಿರಬೇಕು, ಆ ಬಿಸಿಲಿನಲ್ಲಿ ಉಷ್ಣಾಂಶವೂ ಇರಬೇಕು. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಂತಹ ವಾತಾವರಣದಲ್ಲಿ ರಂಬುಟಾನ್ ಬೆಳೆಯಬಹುದು.
ವರ್ಷಕ್ಕೊಮ್ಮೆ ಫಸಲು
ರಂಬುಟಾನ್ ವರ್ಷಕ್ಕೆ ಒಂದೇ ಬಾರಿ ಹಣ್ಣು ಬಿಡುವಂತಹ ಗಿಡಗಳು. ಮಾರ್ಚ್ ತಿಂಗಳಲ್ಲಿ ಹೂ ಬಿಡಲು ಆರಂಭಿಸಿ ಜೂನ್ ನಲ್ಲಿ ಹಣ್ಣು ಬಿಡುತ್ತದೆ. ಮೂರು ತಿಂಗಳವರೆಗೆ ಗಿಡದಲ್ಲಿ ಹಣ್ಣುಗಳು ಬಿಡುತ್ತಿರುತ್ತವೆ. ಸಾಮಾನ್ಯವಾಗಿ ಗೊಂಚಲಿನಲ್ಲಿ ರಂಬುಟಾನ್ ಹಣ್ಣಿರುತ್ತವೆ. ಗೊಂಚಲಿನಲ್ಲಿ ಎಲ್ಲಾವೂ ಹಣ್ಣಾಗಿದ್ದರೆ ಗೊಂಚಲು ಬಿಟ್ಟಿರುವ ಕೊಂಬೆ ಸಮೇತ ಕಟ್ ಮಾಡಬೇಕು.
ಗೊಂಚಲು ಎತ್ತರದಲ್ಲಿದ್ದರೆ ದೋಟಿ ತರದ ಉದ್ದನೆಯ ಫ್ರೂಟ್ ಕಟರ್ ನಿಂದ ಕಟಾವು ಮಾಡಬೇಕು. ಕೈಗೆಟುಕುವಂತಿದ್ದರೆ ಕ್ರಿಪ್ಪರ್ ಎಂಬ ಸಣ್ಣ ಸಲಕರಣೆಯಿಂದ ಹಣ್ಣು ಕಟಾವು ಮಾಡಬೇಕು. ಹಣ್ಣಿನ ಫ್ರೆಶ್ ನೆಸ್ ಉಳಿಸಲು ಕೊಯ್ಲು ಮಾಡಿದ ಹಣ್ಣನ್ನು ಗಾಳಿಯಾಡುವ ಕ್ರೇಟ್ ನಲ್ಲಿಯೇ ಸಾಗಿಸುವುದು ಮತ್ತು ಪ್ಯಾಕ್ ಮಾಡುವುದು ಉತ್ತಮ. ಕಟಾವು ಮಾಡಿದ ಹಣ್ಣುಗಳನ್ನು ಎ, ಬಿ ಮತ್ತು ಸಿ ಗ್ರೇಡ್ ಎಂದು ವಿಂಗಡಿಸಿದರೆ ಎ ಗ್ರೇಡ್ ಹಣ್ಣಿಗೆ ಹೆಚ್ಚಿನ ಬೆಲೆ ಸಿಗುತ್ತದೆ.