ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಾಳೆ ಪೈಪೋಟಿ ನಡೆಯಲಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಎರಡೂ ತಂಡಗಳು ಪಾಯಿಂಟ್ಸ್ ಪಟ್ಟಿಯಲ್ಲಿ ಕೆಳಗಿನ ಸ್ಥಾನದಲ್ಲಿವೆ. ಹೀಗಾಗಿ ಪ್ಲೇ ಆಫ್ ಕನಸು ಜೀವಂತವಾಗಿರಿಸಲು ಉಭಯ ತಂಡಗಳಿಗೂ ಈ ಗೆಲುವು ಅನಿವಾರ್ಯವಾಗಿದೆ.
ಉಳಿದಿರುವ ಮೂರು ಪಂದ್ಯಗಳನ್ನು ಗೆದ್ದರೆ ತಲಾ 14 ಅಂಕಗಳೊಂದಿಗೆ ಎರಡೂ ತಂಡಗಳು ಪ್ಲೇಆಫ್ ರೇಸ್ನಲ್ಲಿ ಉಳಿಯಲ್ಲಿವೆ. ಹೀಗಾಗಿ ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. ಆರ್ಸಿಬಿ ಕಳೆದ 3 ಪಂದ್ಯಗಳನ್ನು ಗೆದ್ದು ಈ ಪಂದ್ಯಕ್ಕೆ ಬರುತ್ತಿದ್ದರೆ ಇತ್ತ ಪಂಜಾಬ್ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋಲನ್ನು ಎದುರಿಸಿದೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಹಕಾರಿಯಾಗಿದೆ. ಧರ್ಮಶಾಲಾದಲ್ಲಿ ಚೆಂಡು ಉತ್ತಮ ಬೌನ್ಸ್ ಪಡೆಯುತ್ತದೆ, ಇದು ಬೌಲರ್ಗಳು ಮತ್ತು ಬ್ಯಾಟ್ಸ್ಮನ್ಗಳಿಗೆ ಸಹಾಯ ಮಾಡುತ್ತದೆ. ವೇಗದ ಬೌಲರ್ಗಳು ಆರಂಭದಲ್ಲಿ ಲಾಭ ಪಡೆಯುತ್ತಾರೆ. ಆದರೆ ಬ್ಯಾಟ್ಸ್ಮನ್ ಪಿಚ್ನಲ್ಲಿ ಸ್ವಲ್ಪ ಸಮಯ ಕಳೆದರೆ ಆ ನಂತರ ಸಾಕಷ್ಟು ರನ್ ಗಳಿಸಬಹುದು. ಈ ಸೀಸನ್ನಲ್ಲಿ ಇಲ್ಲಿಯವರೆಗೆ, ಕೇವಲ ಒಂದು ಪಂದ್ಯವನ್ನು ಮಾತ್ರ ಧರ್ಮಶಾಲಾದಲ್ಲಿ ಆಡಲಾಗಿದೆ. ಇದರಲ್ಲಿ ಪಿಚ್ ಹೆಚ್ಚಾಗಿ ಬೌಲರ್ಗಳ ಪರವಾಗಿತ್ತು. ಬ್ಯಾಟ್ಸ್ಮನ್ಗಳು ಕೊಂಚ ಪರದಾಡುತ್ತಿರುವಂತೆ ಕಂಡುಬಂದಿತು.
ಆರ್ಸಿಬಿ ಹಾಗೂ ಪಂಜಾಬ್ ನಡುವೆ ನಡೆಯುವ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದ್ದು, ಮೇ 9 ರಂದು ಹಗಲಿನಲ್ಲಿ ಶೇ.61 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಆದರೆ, ಸಂಜೆ ವೇಳೆಗೆ ಮಳೆಯಾಗುವ ನಿರೀಕ್ಷೆ ಇಲ್ಲ. ಪಂದ್ಯದ ವೇಳೆ ಹವಾಮಾನ ಸ್ಪಷ್ಟವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಯಾಗುವುದಿಲ್ಲ ಎಂದು ನಿರೀಕ್ಷಿಸಲಾಗಿದೆ.